ಕೋಲಾರ, ಜು.6- ಲಾಟರಿ ಬೆಳೆ ಎಂದೇ ಹೆಸರಾದ ಟೊಮ್ಯಾಟೊ ಬೆಲೆ ಷೇರು ಮಾರುಕಟ್ಟೆಯಂತೆ ಯಾವಾಗ ಬೆಲೆ ಏರುತ್ತೋ, ಇಳಿಯುತ್ತೋ ಗೊತ್ತಾಗುವುದಿಲ್ಲ.
ಇದೀಗ ಬೆಲೆ ಕುಸಿತವಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕೋಲಾರ ಸಮೀಪ ರಸ್ತೆ ಬದಿ ಟೊಮ್ಯಾಟೊವನ್ನು ಸುರಿದು ಹೋಗಿದ್ದಾರೆ.
ಏಷ್ಯಾದಲ್ಲೇ ಅತೀ ದೊಡ್ಡ ಟೊಮ್ಯಾಟೊ ಮಾರುಕಟ್ಟೆಯಾದ ಕೋಲಾರ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ ಗೆ 200 ರಿಂದ 250 ರೂ.ಗೆ ಮಾರಾಟವಾಗುತ್ತಿದೆ. ಹಾಕಿದ ಬಂಡವಾಳ ಕೈ ಸೇರದೆ ಕಂಗೆಟ್ಟಿದ್ದ ರೈತರು ರಸ್ತೆ ಬದಿ ಟೊಮ್ಯಾಟೊ ಸುರಿದು ಹೋಗಿದ್ದಾರೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಬೆಲೆ ಜುಲೈ ಪ್ರಾರಂಭದಲ್ಲಿ ಕುಸಿತವಾಗಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ತಣ್ಣಿರೆರಚಿದಂತಾಗಿದೆ.
ಕೋಲಾರ ಮಾರುಕಟ್ಟೆಗೆ ಪಕ್ಕದ ಆಂಧ್ರ ಮತ್ತು ತಮಿಳುನಾಡಿನಿಂದ ಟೊಮ್ಯಾಟೊ ಬರುತ್ತಿದ್ದು, ಜೊತೆಗೆ ಈ ಬಾರಿ ನಾಟಿ ಮಾಡಲಾದ ಬೆಳೆ ಉತ್ತಮವಾಗಿದ್ದು, ಗುಣಮಟ್ಟದ ಇಳುವರಿ ಬಂದಿದ್ದು, ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ಮಾಲು ಬರುತ್ತಿದ್ದು, ಬೆಲೆ ಇಳಿಕೆಗೆ ಕಾರಣವಾಗಿದೆ.
ಮಾರುಕಟ್ಟೆಯಲ್ಲೇ ಕೆಜಿಗೆ 18 ರಿಂದ 20 ರೂ.ಗೆ ಮಾರಾಟವಾಗುತ್ತಿದೆ. ಕೂಲಿ, ಸಾಗಾಟ ವೆಚ್ಚ ಔಷಧಿ, ಮಾರುಕಟ್ಟೆಯ ಕಮಿಷನ್ ಎಲ್ಲವನ್ನೂ ಲೆಕ್ಕ ಹಾಕಿದರೆ ಭಾರೀ ನಷ್ಟವಾಗುತ್ತಿದ್ದು, ಇದರಿಂದ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದಲ್ಲಿ ಹೆಚ್ಚಾಗಿ ಟೊಮ್ಯಾಟೊ ಬೆಳೆಯುವ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಯಲಾಗಿದ್ದು, ಉತ್ತಮ ಇಳುವರಿ ಬಂದಿದ್ದು, ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಬರುತ್ತಿರುವುದರಿಂದ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
