Sunday, November 24, 2024
Homeರಾಜಕೀಯ | Politicsಸಿದ್ದರಾಮಯ್ಯ ವಿರುದ್ಧದ ಹೋರಾಟದಲ್ಲಿ ಟಾರ್ಗೆಟ್ ಆಗ್ತಿದ್ದಾರೆ ಡಿಕೆ

ಸಿದ್ದರಾಮಯ್ಯ ವಿರುದ್ಧದ ಹೋರಾಟದಲ್ಲಿ ಟಾರ್ಗೆಟ್ ಆಗ್ತಿದ್ದಾರೆ ಡಿಕೆ

ಬೆಂಗಳೂರು,ಆ.6– ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್‌‍ ನಡೆಸುತ್ತಿರುವ ಜಂಟಿ ಹೋರಾಟದಲ್ಲಿ ಟಾರ್ಗೆಟ್‌ ಆಗುತ್ತಿರುವವವರು ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತ್ರ!

ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿ ಎನ್‌ಡಿಎ ಮೈತ್ರಿಕೂಟ ಬೆಂಗಳೂರಿನಿಂದ ಮೈಸೂರುವರೆಗೆ ನಡೆಸುತ್ತಿರುವ ಪಾದಯಾತ್ರೆ ಪ್ರಾರಂಭವಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಅಸಲಿಗೆ ಎರಡೂ ಪಕ್ಷಗಳಿಗೆ ಗುರಿಯಾಗಬೇಕಾಗಿದ್ದ ಸಿಎಂ ಸಿದ್ದರಾಮಯ್ಯ ಸದ್ಯ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದರೆ ಬಿಜೆಪಿ-ಜೆಡಿಎಸ್‌‍ ಗುರಿ ಡಿಸಿಎಂ ಶಿವಕುಮಾರ್‌ ಆಗುತ್ತಿದ್ದಾರೆ.

ಪಾದಯಾತ್ರೆ ಪ್ರಾರಂಭಕ್ಕೂ ಮುನ್ನವೇ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಿದ್ದ ಶಿವಕುಮಾರ್‌ ಮುಖ್ಯವಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್‌‍.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರನ್ನು ಗುರಿಯಾಗಿಟ್ಟುಕೊಂಡು ಕೆಂಡ ಕಾರುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ನಾವೇನು ಕಡಿಮೆ ಎಂಬಂತೆ ಕುಮಾರಸ್ವಾಮಿ, ವಿಜಯೇಂದ್ರ ಸೇರಿದಂತೆ ಎರಡೂ ಪಕ್ಷಗಳ ನಾಯಕರು ಸಿದ್ದರಾಮಯ್ಯನವರನ್ನು ಬದಿಗಿರಿಸಿ, ಡಿ.ಕೆ.ಶಿವಕುಮಾರ್‌ ಅವರನ್ನು ವೈಯಕ್ತಿಕ ನೆಲಗಟ್ಟಿನಲ್ಲಿ ದಾಳಿ ನಡೆಸುತ್ತಿರುವುದು ಪಾದಯಾತ್ರೆಯ ವಿಶೇಷವಾಗಿದೆ.

ಪಾದಯಾತ್ರೆಯುದ್ದಕ್ಕೂ ಡಿ.ಕೆ.ಶಿವಕುಮಾರ್‌ ಮತ್ತು ಕುಮಾರಸ್ವಾಮಿ ಅವರುಗಳು ತಮ ಕುಟುಂಬದ ಆಸ್ತಿ ವಿಷಯವೂ ಪ್ರಸ್ತಾಪವಾಗಿದೆ. ಅದರಲ್ಲೂ ಪ್ರತಿದಿನ ಜನಾಂದೋಲನ ನಡೆಸುತ್ತಿರುವ ಡಿಕೆಶಿ ಎರಡೂ ಪಕ್ಷಗಳ ಭ್ರಷ್ಟಾಚಾರವನ್ನು ಜನತೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಸೇರಿಗೆ ಸವ್ವಾ ಸೇರು ಎಂಬಂತೆ ಕುಮಾರಸ್ವಾಮಿ ಕೂಡ ಡಿಕೆಶಿಯನ್ನು ಗುರಿಯಾಗಿಟ್ಟುಕೊಂಡು ಹಿಂದೆಂದಿಗಿಂತಲೂ ಆಕ್ರಮಣಕಾರಿ ಶೈಲಿಯಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ.

ಡಿಕೆಶಿ ಭ್ರಷ್ಟಾಚಾರದ ಪಿತಾಮಹ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡದಿರುವುದೇ ಲೇಸು ಎಂದು ಬಿ.ವೈ.ವಿಜಯೇಂದ್ರ ಮಾಡಿದ ಆರೋಪವೇ ಇದಕ್ಕೆ ಮುನ್ನುಡಿ ಬರೆದಿತ್ತು.ಯಾವಾಗ ವಿಜಯೇಂದ್ರ ತಮ ಮೇಲೆ ಇಷ್ಟು ವೈಯಕ್ತಿಕ ನೆಲಗಟ್ಟಿನಲ್ಲಿ ಆರೋಪ ಮಾಡಿದರೋ ಆಗ ಕೆರಳಿ ಕೆಂಡವಾದ ಡಿಕೆಶಿಯವರು ಯಡಿಯೂರಪ್ಪ ಹಾಗೂ ವಿಜಯೇಂದ್ರರ ಜೊತೆಗೆ ಕುಮಾರಸ್ವಾಮಿ ಕುಟುಂಬದವರ ವಿರುದ್ಧ ಆರೋಪಗಳ ಸುರಿಮಳೆಗೈದರು.

ಇಡೀ ಪಾದಯಾತ್ರೆಯು ಕುಮಾರಸ್ವಾಮಿ ಹಾಗೂ ಡಿಕೆಶಿ ಅವರ ಆಸ್ತಿ ಸಮರವಾಗಿ ಮಾರ್ಪಟ್ಟಿದೆ. ನಾನು ನಿನ್ನ ಹಾಗೆ ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಕನಕಪುರದ ಟೆಂಟ್‌ನಲ್ಲಿ ಸಿನಿಮಾ ತೋರಿಸಿ ಆಸ್ತಿ ಬರೆಸಿಕೊಂಡಿದ್ದೇನೆಯೇ ಎಂದು ತಿರುಗೇಟು ಕೊಡುತ್ತಿದ್ದಾರೆ.

ಯಾವ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಗುರಿಯಾಗಬೇಕಾಗಿತ್ತೋ ಬದಲಿಗೆ ಇಲ್ಲಿ ಶಿವಕುಮಾರ್‌ ಎರಡೂ ಪಕ್ಷಗಳಿಗೆ ಆಹಾರವಾಗಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ವಿಭಾಗದ ಪ್ರಾಂತ್ಯದಲ್ಲಿ ಎನ್‌ಡಿಎ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿತ್ತು. 14 ಲೋಕಸಭಾ ಕ್ಷೇತ್ರಗಳ ಪೈಕಿ ಹಾಸನ, ಚಾಮರಾಜನಗರ ಹೊರತುಪಡಿಸಿದರೆ 12 ಕ್ಷೇತ್ರಗಳನ್ನು ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟ ಗೆದ್ದುಕೊಂಡಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ವಿಭಾಗ ಬಹುತೇಕ ಕಾಂಗ್ರೆಸ್‌‍ಮಯವಾಗಿತ್ತು. ಜೆಡಿಎಸ್‌‍ನ ಭದ್ರಕೋಟೆಯನ್ನು ಡಿಕೆಶಿ ಯಶಸ್ವಿಯಾಗಿ ಬೇಧಿಸಿದ್ದರು.

ಯಾವಾಗ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ವ್ಯತಿರಿಕ್ತವಾಗಿ ಹೊರಬಂದಿತೋ, ಅಸ್ತಿತ್ವ ಉಳಿಸಿಕೊಳ್ಳಲು ಕುಮಾರಸ್ವಾಮಿ ಮತ್ತು ಡಿಕೆಶಿ ಪೈಪೋಟಿಗೆ ಬಿದ್ದಂತೆ ವಾಕ್ಸಮರಕ್ಕೆ ನಿಂತಿದ್ದಾರೆ.ಇಬ್ಬರ ಜಗಳದಲ್ಲಿ ಸಿದ್ದರಾಮಯ್ಯ ಪ್ರಕರಣ ಗೌಣವಾಗಿದೆ. ಈ ಎಲ್ಲಾ ಆಟವನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ದಿಲ್ಲದೆ ಹಳೆ ಮೈಸೂರಿನಲ್ಲಿ ಪಕ್ಷ ಸಂಘಟನೆಯ ಬೇರುಗಳನ್ನು ಬಲಪಡಿಸಿಕೊಳ್ಳುತ್ತಿದೆ.

RELATED ARTICLES

Latest News