ಬೆಂಗಳೂರು,ಜ.21- ಭಕ್ತಿ, ಗೌರವ, ಧರ್ಮದ ವಿಚಾರಗಳು ಪ್ರಚಾರದ ಸರಕುಗಳಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರುಗಳಿಗೆ ತಿರುಗೇಟು ನೀಡಿದ್ದಾರೆ. ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸರ್ಕಾರಿ ರಜೆ ಘೋಷಣೆ ಮಾಡುವಂತೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮನಿದ್ದಾನೆ. ನಾವು ಬಿಜೆಪಿಯವರಿಂದ ಹೇಳಿಸಿಕೊಳ್ಳಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿ ಎಂದು ಯಾರೂ ನಮಗೆ ಕೇಳಿರಲಿಲ್ಲ. ನಾವಾಗಿಯೇ ಪೂಜೆಗೆ ಆದೇಶ ಮಾಡಿದ್ದೇವೆ. ಕೇಳುವ, ಹೇಳುವ ಅವಶ್ಯಕತೆ ಕೂಡ ಇಲ್ಲ. ಯಾವ ರೀತಿಯ ಪೂಜೆ, ಆಚರಣೆ, ಪುರಸ್ಕಾರಗಳನ್ನು ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದರು.
ನಾಳೆ ರಜೆ ಘೋಷಣೆ ಬಿಜೆಪಿ ನಾಯಕರು ಒತ್ತಾಯ
ನಮ್ಮ ನಂಬಿಕೆ ಆಧಾರದ ಮೇಲೆ ನಾವು ಕೆಲಸ ಮಾಡುತ್ತೇವೆ. ಪ್ರಾರ್ಥನೆಗಳಿಂದ ಫಲ ದೊರೆಯುತ್ತದೆ ಎಂಬ ವಿಶ್ವಾಸವಿದೆ. ಹೀಗಾಗಿ ಎಲ್ಲರೂ ಪ್ರಾರ್ಥನೆ ಮಾಡಿಕೊಳ್ಳಿ ಎಂದು ಹೇಳುತ್ತಿದ್ದೇವೆ. ಬಿಜೆಪಿಯವರು ನಮ್ಮ ಮೇಲೆ ಒತ್ತಡ ಹೇರುವ ಅಗತ್ಯವಿಲ್ಲ. ನಾವು ನಮ್ಮ ಕರ್ತವ್ಯ ಮಾಡುತ್ತೇವೆ ಎಂದು ಹೇಳಿದರು. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಇರಬಾರದು. ಭಕ್ತಿ, ಧರ್ಮ, ಗೌರವಗಳು ಪ್ರಚಾರದ ಸರಕುಗಳಾಗಬಾರದು ಎಂದರು.