ಬೆಂಗಳೂರು,ಜ.1- ದೇವಸ್ಥಾನಗಳನ್ನು ಸರ್ಕಾರದ ವಶದಲ್ಲಿರಿಸಲು ಬಯಸುವ ಡಿ.ಕೆ.ಶಿವಕುಮಾರ್ ಅವರಿಗೆ ಇತರ ಮತಗಳ ಶ್ರದ್ಧಾ ಕೇಂದ್ರಗಳನ್ನು ಸರ್ಕಾರಕ್ಕೆ ಒಪ್ಪಿಸಿ ಎಂದು ಹೇಳುವ ಧೈರ್ಯ ಇದೆಯಾ? ಎಂದು ಬಿಜೆಪಿ ಪ್ರಶ್ನಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಡಿಕೆಶಿಯವರೇ, ಕಾಂಗ್ರೆಸ್ ಅನಾಯಕಿ ಹಿಂದೂವಲ್ಲ ಎನ್ನುವ ಕಾರಣಕ್ಕೆ ಹಿಂದೂ ವಿರೋಧಿ ನಿಲುವು ತೆಗೆದುಕೊಳ್ಳುವುದು ಎಷ್ಟು ಸರಿ? ಎಂದು ತರಾಟೆಗೆ ತೆಗೆದುಕೊಂಡಿದೆ.
ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕೈಗೊಳ್ಳುವ ಎಲ್ಲಾ ನಿರ್ಧಾರಗಳನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ದೇಗುಲಗಳನ್ನು ಸರ್ಕಾರದಿಂದ ಮುಕ್ತಗೊಳಿಸುವುದಕ್ಕೆ ವಿರೋಧ, ಗೋಹತ್ಯಾ ನಿಷೇಧಕ್ಕೆ ವಿರೋಧ, ಮತಾಂತರ ನಿಯಂತ್ರಣ ಕಾಯ್ದೆಗೆ ವಿರೋಧ.. ಎಂದು ಕುಹುಕವಾಡಿದೆ.
ದೇವಸ್ಥಾನಗಳನ್ನು ಸರ್ಕಾರಿ ಆಡಳಿತದಿಂದ ಮುಕ್ತ ಮಾಡುವ ಬಿಜೆಪಿ ಸರ್ಕಾರದ ನಿಲುವಿಗೆ ಕಾಂಗ್ರೆಸ್ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?
ಬಹುಸಂಖ್ಯಾತ ಹಿಂದೂಗಳ ಭಾವನೆಗೆ ವಿರುದ್ಧವಾಗಿ ವರ್ತಿಸುವುದೇ ಕಾಂಗ್ರೆಸ್ ಸಿದ್ಧಾಂತವೇ? ಎಂದು ಬಿಜೆಪಿ ವ್ಯಂಗ್ಯವಾಡಿದೆ.
