Thursday, December 5, 2024
Homeರಾಜಕೀಯ | Politicsದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ ಡಿಕೆಶಿ

ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ ಡಿಕೆಶಿ

ಬೆಂಗಳೂರು,ಜೂ30– ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.ದೆಹಲಿ ಪ್ರವಾಸದಲ್ಲಿರುವ ಅವರು, ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿ ನಡೆಯುವ ಉಪಚುನಾವಣೆಗಳ ಸಿದ್ಧತೆ ಹಾಗೂ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚೆ ನಡೆಸಿದ್ದಾರೆ.

ಜೊತೆಗೆ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.ವಿಧಾನಸಭೆ ಚುನಾವಣೆಯ ಬಳಿಕ ಸರ್ಕಾರ ರಚನೆ ವೇಳೆ ಹೈಕಮಾಂಡ್‌ ನಾಯಕರ ಜೊತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ರವರು ರಹಸ್ಯ ಚರ್ಚೆ ನಡೆಸಿದ್ದು, ಅನಂತರ ಸರ್ಕಾರ ರಚನೆಯಾಗಿದೆ. ಸುಗಮವಾದ ಆಡಳಿತ ನಡೆಯುತ್ತಿದೆ.

ಇದರ ನಡುವೆ ಅಪ್ರಚೋದಿತವಾಗಿ ಸಿದ್ದರಾಮಯ್ಯ ಅವರ ಬಣದ ನಾಯಕರು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಬಗ್ಗೆ ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ.ಮತ್ತೊಂದೆಡೆ ಡಿ.ಕೆ.ಶಿವಕುಮಾರ್‌ ಬಣದ ಕೆಲ ಶಾಸಕರು ಮುಖ್ಯಮಂತ್ರಿ ಬದಲಾವಣೆ ಅಥವಾ ಅಧಿಕಾರ ಹಸ್ತಾಂತರದ ಬಗ್ಗೆ ಹೇಳಿಕೆ ನೀಡಿ ಗೊಂದಲವುಂಟು ಮಾಡುತ್ತಿದ್ದಾರೆ.

ಪರಸ್ಪರ ಈ ಗೊಂದಲಗಳಿಂದಾಗಿ ಪಕ್ಷದಲ್ಲಿ ಭಿನ್ನಮತ ಹಾಗೂ ಗುಂಪುಗಾರಿಕೆ ತಲೆದೋರುವಂತಾಗಿವೆ. ಆರಂಭದಿಂದಲೂ ಮುಖ್ಯಮಂತ್ರಿಯವರ ಜೊತೆ ಸೌಹಾರ್ದಯುತವಾದ ಸಂಬಂಧ ರೂಢಿಸಿಕೊಂಡಿರುವ ಡಿ.ಕೆ.ಶಿವಕುಮಾರ್‌ ಆಡಳಿತಕ್ಕೆ ಹೆಗಲಾಗಿದ್ದಾರೆ.ಇದರ ನಡುವೆ ಅನಪೇಕ್ಷಣೀಯವಾಗಿ ಹೇಳಿಕೆಗಳು ಹೊರಬರುತ್ತಿರುವುದು ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತಿದೆ ಹಾಗೂ ಕಾರ್ಯಕರ್ತರಲ್ಲೂ ಗೊಂದಲ ಹುಟ್ಟುಹಾಕುತ್ತಿದೆ.

ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಯಾವುದೇ ಚರ್ಚೆಗೆ ಅವಕಾಶವಾಗದಂತೆ ಕಡಿವಾಣ ಹಾಕಲು ಡಿ.ಕೆ.ಶಿವಕುಮಾರ್‌ರವರು ಮಲ್ಲಿಕಾರ್ಜುನ ಖರ್ಗೆಯವರ ಬಳಿ ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ ಇದೇ ರೀತಿಯ ಚರ್ಚೆಗಳು ನಡೆದಾಗ ಮಧ್ಯಪ್ರವೇಶಿಸಿದ ಮಲ್ಲಿಕಾರ್ಜುನ ಖರ್ಗೆಯವರು, ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವನೆಗಳಿಲ್ಲ. ಈ ಕುರಿತು ಚರ್ಚೆಗಳು ಅನಗತ್ಯ ಎಂದು ಸ್ಪಷ್ಟಪಡಿಸಿದರು. ಅದರ ಪ್ರಯುಕ್ತ ಎಲ್ಲಾ ಚರ್ಚೆಗಳಿಗೆ ಬ್ರೇಕ್‌ ಬಿದ್ದಿತ್ತು. ಚುನಾವಣೆ ಬಳಿಕ ಮತ್ತೆ ಚರ್ಚೆಗಳು ಆರಂಭವಾಗಿವೆ.

ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಂತದಲ್ಲಿ ಇಂತಹ ಚರ್ಚೆಗಳು ಗೊಂದಲ ಉಂಟುಮಾಡಬಹುದು ಎಂಬ ಆತಂಕ ಕಾಡಲಾರಂಭಿಸಿದೆ. ಅದಕ್ಕಾಗಿ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ ಮೊರೆ ಹೋಗಿದ್ದು, ಗೊಂದಲ ಉಂಟುಮಾಡುವ ಯಾವುದೇ ಹೇಳಿಕೆಗಳನ್ನು ನೀಡದಂತೆ ರಾಜ್ಯ ಸಚಿವರು ಹಾಗೂ ನಾಯಕರಿಗೆ ಕಡಿವಾಣ ಹಾಕಲು ಮನವಿ ಮಾಡಿದ್ದಾರೆ.

ಚನ್ನಪಟ್ಟಣ, ಶಿಗ್ಗಾವು ಮತ್ತು ಸಂಡೂರು ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಮತ್ತಿತರ ವಿಚಾರಗಳ ಬಗ್ಗೆಯೂ ಖರ್ಗೆಯವರೊಂದಿಗೆ ಡಿ.ಕೆ.ಶಿವಕುಮಾರ್‌ ಚರ್ಚೆ ನಡೆಸಿದ್ದಾರೆ.

RELATED ARTICLES

Latest News