Monday, June 17, 2024
Homeರಾಜ್ಯಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭ : ಡಿಸಿಎಂ ಡಿ.ಕೆ.ಶಿವಕುಮಾರ್‌

ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭ : ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು,ಜೂ.11- ಬಿಬಿಎಂಪಿಗೆ ಆದಷ್ಟು ಶೀಘ್ರದಲ್ಲಿ ಚುನಾವಣೆ ನಡೆಸಲಾಗುವುದು. ಅದಕ್ಕೆ ಅಗತ್ಯವಿರುವ ವಾರ್ಡ್‌ ಮೀಸಲಾತಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಈಗಾಗಲೇ ಆರಂಭಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆದಷ್ಟು ಶೀಘ್ರವಾಗಿ ಚುನಾವಣೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಬೆಂಗಳೂರನ್ನು ಆಡಳಿತಾತಕವಾಗಿ ವಿಭಜಿಸಬೇಕು ಎಂಬ ಪ್ರಸ್ತಾವನೆ ಇದೆ. ಸದ್ಯಕ್ಕೆ ಶೀಘ್ರ ಚುನಾವಣೆ ಮಾಡುವತ್ತ ನಾವು ಗಮನ ಹರಿಸಿದ್ದೇವೆ. ನ್ಯಾಯಾಲಯ ಕೂಡ ಪದೇಪದೇ ಸೂಚನೆ ನೀಡುತ್ತಿದೆ ಎಂದು ಹೇಳಿದರು.

ಏಕಕಂತು ತೀರುವಳಿ ಯೋಜನೆಯಡಿ ಆಸ್ತಿ ತೆರಿಗೆ ಪಾವತಿಗೆ ಜೂ.31 ಅಂತಿಮ ಗಡುವಾಗಿದೆ. ಅದರ ನಂತರ ಆಸ್ತಿ ಮಾಲಿಕರು ಸುಸ್ತಿದಾರರಾಗಿದ್ದಾರೆ. ಗಡುವಿನ ಒಳಗೆ ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಸಿದರೆ ಬಡ್ಡಿ ಹಾಗೂ ದಂಡ ವಿನಾಯಿತಿ ಸಿಗಲಿದೆ ಎಂದರು.

ಬೆಂಗಳೂರಿನಲ್ಲಿ 20 ಲಕ್ಷ ಆಸ್ತಿಗಳಿದ್ದು, 5,200 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿತ್ತು. ಇದುವರೆಗೂ 1,300 ಕೋಟಿ ರೂ. ಬಂದಿದೆ. ಇನ್ನೂ 3,500 ಕೋಟಿ ಬಾಕಿ ಇದೆ. ಆಸ್ತಿ ತೆರಿಗೆ ವ್ಯಾಪ್ತಿಗೊಳಪಡದೇ ಇರುವ 4 ಲಕ್ಷ ಸ್ವತ್ತುಗಳು ಬೆಂಗಳೂರಿನಲ್ಲಿವೆ. ಅವುಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ ಎ ಖಾತೆ ಅಥವಾ ಬಿ ಖಾತೆ ನೀಡಿ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಡಲಾಗುವುದು. ಇದರಲ್ಲಿ ಈವರೆಗೂ 50 ಸಾವಿರ ಆಸ್ತಿ ಮಾಲಿಕರು ಮಾತ್ರ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯನ್ನು ಜೂ.14 ರಂದು ಆಚರಿಸಲಾಗುತ್ತಿದೆ. ಈ ವೇಳೆ ಹಸಿರು ಬೆಂಗಳೂರು ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಯಾ ಪ್ರದೇಶದಲ್ಲಿ ಗಿಡನೆಟ್ಟು ಅವುಗಳನ್ನು ದತ್ತು ತೆಗೆದುಕೊಂಡು ಬೆಳೆಸಲು ಅವಕಾಶ ಮಾಡಿಕೊಡಲಾಗಿದೆ.

250 ಶಾಲೆಗಳು ಬಿಬಿಎಂಪಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಈವರೆಗೆ 52 ಸಾವಿರ ಗಿಡಗಳನ್ನು ನೆಡಲಾಗಿದ್ದು, ಅವುಗಳಲ್ಲಿ ಶೇ.80 ರಷ್ಟು ಊರ್ಜಿತವಾಗಿವೆ. ನಷ್ಟವಾಗಿರುವ ಶೇ.20 ಅನ್ನು ಮರು ನಾಟಿ ಮಾಡಲಾಗುವುದು. ಪ್ರಸಕ್ತ ವರ್ಷ 2 ಲಕ್ಷ ಗಿಡ ನೆಡುವ ಗುರಿ ಇದೆ. ಗಿಡ ನೆಡಲು ಲಭ್ಯವಿರುವ ಜಾಗದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಮರಗಳ ಸಮೀಕ್ಷೆ ನಡೆಸಲಾಗುವುದು. ಬೊಮನಹಳ್ಳಿ ವಲಯದ ವಿದ್ಯಾಪೀಠ ವಾರ್ಡ್‌ನಲ್ಲಿ 4,600, ಕತ್ರಿಗುಪ್ಪೆ ವಾರ್ಡ್‌ನಲ್ಲಿ 4,300 ಮರಗಳ ಸಮೀಕ್ಷೆ ಆಗಿದೆ. ಮರಗಳನ್ನು ಗುರುತಿಸಿ ಅವು ಬೀಳದಂತೆ ಅಗತ್ಯ ಸ್ವರೂಪ ನೀಡಲಾಗುವುದು. ಬೇರುಗಳು ಗಟ್ಟಿಗೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಅಂತರ್ಜಲ ಅಭಿವೃದ್ಧಿಗೆ ತೆರೆದ ಬಾವಿಗಳ ಮರುಪೂರಣ, ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಬಿಬಿಎಂಪಿ ವ್ಯಾಪ್ತಿಯಲ್ಲಿನ ಪಾರ್ಕ್‌ಗಳನ್ನು ಇನ್ನು ಮುಂದೆ ಬೆಳಿಗ್ಗೆ 5 ರಿಂದ ರಾತ್ರಿ 8 ರವರೆಗೂ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿಡಲಾಗುವುದು.

ಪ್ರಸ್ತುತ ಬೆಳಿಗ್ಗೆ 5 ರಿಂದ 8 ಗಂಟೆ ಮಧ್ಯಾಹ್ನ 1.30 ರಿಂದ ರಾತ್ರಿ 8 ಗಂಟೆವರೆಗೂ ಮಾತ್ರ ಮುಕ್ತವಾಗಿರಿಸಲಾಗಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ ಸಮಯ ಬದಲಾವಣೆ ಮಾಡಲಾಗಿದೆ. ಪಾರ್ಕ್‌ನಲ್ಲಿ ಅನಪೇಕ್ಷಣೀಯವಾದ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸರ ಜೊತೆ ಮಾರ್ಷಲ್‌ಗಳು ಗಸ್ತು ತಿರುಗುತ್ತಾರೆ. ಸಿಸಿಟಿವಿ ಈಗಾಗಲೇ ಅಳವಡಿಸಲಾಗಿದೆ. ಅದು ಮೀರಿ ಯಾವುದಾದರೂ ಘಟನೆಗಳು ಕಂಡುಬಂದರೆ ಸಾರ್ವಜನಿಕರು 1533, 22660000, 22221188 ಅಥವಾ ವಾಟ್‌್ಸಆಪ್‌ 94806857 ಗೆ ಮಾಹಿತಿ ನೀಡಬಹುದು ಎಂದರು.

ಬೆಂಗಳೂರಿನಲ್ಲಿ ಫ್ಲೆಕ್‌್ಸಗಳಿಗೆ ನಿಷೇಧ ಹೇರಲಾಗಿದೆ. ಅನಧಿಕೃತವಾಗಿ ಅಳವಡಿಸುವ ಫ್ಲೆಕ್‌್ಸಗಳ ಬಗ್ಗೆ ಸಾರ್ವಜನಿಕರು ಬಿಬಿಎಂಪಿಯ ದೂರವಾಣಿಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದು. ಇನ್ನು ಮುಂದೆ ಯಾವುದೇ ಪ್ರದೇಶದಲ್ಲಿ ಫ್ಲೆಕ್‌್ಸಗಳು ಕಂಡುಬಂದರೆ ಆಯಾ ಪ್ರದೇಶದ ಕಂದಾಯ ಅಧಿಕಾರಿಯನ್ನು ಹೊಣೆ ಮಾಡಿ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.

ಅಕ್ರಮ ಸಕ್ರಮ ಮಸೂದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಅಲ್ಲಿನ ಆದೇಶ ಬಂದ ಬಳಿಕ ಅದನ್ನು ಜಾರಿ ಮಾಡಲಾಗುವುದು. ಬೆಂಗಳೂರಿನ ನಾಲ್ಕು ಕಡೆ ತ್ಯಾಜ್ಯವನ್ನು ಬಳಸಿ ವಿದ್ಯುತ್‌ ಉತ್ಪಾದನೆಗೆ ಯೋಜನೆ ಸಿದ್ಧಗೊಂಡಿದೆ. ಶೀಘ್ರವೇ ಟೆಂಡರ್‌ ಕರೆಯಲಾಗುವುದು ಎಂದರು.

RELATED ARTICLES

Latest News