Wednesday, December 4, 2024
Homeರಾಜಕೀಯ | Politicsಸುಮಲತಾಗೆ ಟಾಂಗ್ ಕೊಟ್ಟ ಡಿಕೆಶಿ

ಸುಮಲತಾಗೆ ಟಾಂಗ್ ಕೊಟ್ಟ ಡಿಕೆಶಿ

ಬೆಂಗಳೂರು,ಏ.1- ಕುಂಬಳಕಾಯಿ ಕಳ್ಳ ಎಂದರೆ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ತಾವು ಸುಮಲತಾ ಅವರ ಸುದ್ದಿಗೆ ಹೋಗಿಲ್ಲ.

ನಮಗೆ ಅದರ ಅಗತ್ಯವೂ ಇಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನನಗೆ ವಿಷ ಹಾಕಿದರು ಎಂದು ಟೀಕೆ ಮಾಡಿದ್ದಕ್ಕೆ ನಾನು ಕುಮಾರಸ್ವಾಮಿ ವಿಚಾರವಾಗಿ ಮಾತನಾಡಿದ್ದೇನೆ. ಕುಂಬಳಕಾಯಿ ಕಳ್ಳ ಎಂದರೆ ಸುಮಲತಾ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ಅಂಬರೀಶ್ ಅವರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ದೇಶಕ್ಕೆ ಗೊತ್ತಿದೆ. ಅವರು ಕೊನೆಗಾಲದಲ್ಲಿ ಏನು ಹೇಳಿದರು ಎಂಬುದು ಕೂಡ ಗೊತ್ತಿದೆ. ನಾವು ಅದನ್ನೆಲ್ಲ ಏಕೆ ಚರ್ಚೆ ಮಾಡಬೇಕು. ನಾನು ಸುಮಲತಾ ಅವರ ವಿಷಯಕ್ಕೆ ಇವತ್ತು ಹೋಗುವುದಿಲ್ಲ. ಇನ್ಯಾವತ್ತೂ ಹೋಗುವುದಿಲ್ಲ . ಅದರ ಅವಶ್ಯತೆಯೂ ಇಲ್ಲ ಎಂದರು.

ಸುಮಲತಾ ಬಿಜೆಪಿಯಲ್ಲಿದ್ದು ಆ ಪಕ್ಷದ ಸಿದ್ದಾಂತಕ್ಕೆ ಅನುಗುಣವಾಗಿ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅಲ್ಲಿಂದ ಹೊರ ಬಂದ ಬಳಿಕ ನಾವು ಮಿಕ್ಕ ವಿಚಾರಗಳನ್ನು ಮಾತನಾಡುತ್ತೇವೆ ಎಂದು ಹೇಳಿದರು.

ದೇಣಿಗೆ ಸಂಗ್ರಹ ಅನಿವಾರ್ಯ:
ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದೆ. ಚುನಾವಣೆ ಕಾಲದಲ್ಲಿ ಜಾಹಿರಾತುಗಳನ್ನು ನೀಡಬೇಕು, ಚುನಾವಣಾ ವೆಚ್ಚಗಳನ್ನು ನಿರ್ವಹಣೆ ಮಾಡಬೇಕು. ಹೀಗಾಗಿ ನಮಗೆ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಿಸುವುದು ಅನಿವಾರ್ಯವಾಗಿದೆ ಎಂದರು.

ಆದಾಯ ತೆರಿಗೆ ಇಲಾಖೆ ತಮಗೆ ನೋಟಿಸ್ ನೀಡಿರುವ ಬಗ್ಗೆ ಬೇರೆ ಸಂದರ್ಭದಲ್ಲಿ ಚರ್ಚೆ ಮಾಡುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು. ನಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ತಾವು ಹಾಜರಿರಲು ಪ್ರಯತ್ನಿಸುತ್ತೇನೆ. ಪ್ರತಿದಿನ ಕನಿಷ್ಠ ಮೂರು ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಪ್ರಯತ್ನಿಸುವುದಾಗಿ ತಿಳಿಸಿದರು.

RELATED ARTICLES

Latest News