ಬೆಂಗಳೂರು,ಆ.21- ಬಿಜೆಪಿಯವರು ತಮ್ಮ ಮೇಲಿನ ಭಿನ್ನಮತವನ್ನು ಸರಿಪಡಿಸಿಕೊಳ್ಳಲು ತಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆಯ ನೆಪ ಹೇಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಅಭಿಯೋಜನೆಗೆ ಅನುಮತಿ ಕೊಟ್ಟ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು.
ಬಿಜೆಪಿಯವರ ಪ್ರತಿಭಟನೆಯಲ್ಲಿ ಹುರುಳಿಲ್ಲ. ಈ ಮೊದಲು ಅವರು ನಡೆಸಿದ ಪಾದಯಾತ್ರೆಗೆ ನಾವು ಸೂಕ್ತ ಉತ್ತರ ಕೊಟ್ಟಿದ್ದೇವೆ. ನಾಳೆಯೂ ಪ್ರತಿಭಟನೆ ಮಾಡಲಿ, ನಾವು ಬೇಡ ಎನ್ನುವುದಿಲ್ಲ. ಬಿಜೆಪಿಯಲ್ಲಿ ಆಂತರಿಕ ಬಿರುಕುಗಳು ಹೆಚ್ಚಿವೆ. ಅದನ್ನು ಸರಿಪಡಿಸಿಕೊಳ್ಳಲು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ಆಲಮಟ್ಟಿ ತುಂಬಿ ತುಳುಕುತ್ತಿದೆ. ಇಂದು ಅಲ್ಲಿಗೆ ಮುಖ್ಯಮಂತ್ರಿಗಳೊಂದಿಗೆ ತೆರಳಿ ಬಾಗಿನ ಅರ್ಪಿಸಲಾಗುವುದು ಎಂದು ಹೇಳಿದರು.ಮಂಡ್ಯ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯ ಕೊರತೆಯಿದೆ. ಕೆರೆಗಳು ತುಂಬಿಲ್ಲ. ಬೇರೆ ಕಡೆ ಉತ್ತಮ ಮಳೆಯ ವಾತಾವರಣವಿದೆ ಎಂದರು.
ತುಂಗಭದ್ರಾ ಅಣೆಕಟ್ಟಿನಲ್ಲಿ 19ನೇ ಕ್ರಸ್ಟ್ಗೇಟ್ ಒಡೆದು ಹೋದಾಗ ವಿರೋಧಪಕ್ಷಗಳು ವ್ಯಾಪಕ ಟೀಕೆ ಮಾಡಿದ್ದವು. ನಾವು ಪ್ರತಿಕ್ರಿಯಿಸಲಿಲ್ಲ. ಹಗಲು-ರಾತ್ರಿ ಕಷ್ಟಪಟ್ಟು ಸಿಬ್ಬಂದಿಗಳು, ಅಧಿಕಾರಿಗಳು ಕೆಲಸ ಮಾಡಿ ಗೇಟ್ ದುರಸ್ತಿ ಮಾಡಿದ್ದಾರೆ. ಇಡೀ ದೇಶವೇ ಈ ಕೆಲಸವನ್ನು ಗಮನಿಸುತ್ತಿತ್ತು ಎಂದರು.
ತುಂಗಭದ್ರಾ ಅಣೆಕಟ್ಟು ಕೂಡ ತುಂಬುತ್ತದೆ. ಆ ಬಳಿಕ ನಾನು ಮತ್ತು ಮುಖ್ಯಮಂತ್ರಿಯವರು ಹೊಗಿ ಬಾಗಿನ ಅರ್ಪಿಸುತ್ತೇವೆ. ಗೇಟ್ ದುರಸ್ತಿಗೆ ಶ್ರಮಿಸಿದವರನ್ನು ಸನಾನಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ರಾಜ್ಯದ ಎಲ್ಲಾ ಜಲಾಶಯಗಳ ಸುರಕ್ಷತೆ ಅಧ್ಯಯನಕ್ಕಾಗಿ ತಾಂತ್ರಿಕ ತಂಡವೊಂದನ್ನು ರಚಿಸಿ ಕಳುಹಿಸಲಾಗಿದೆ ಎಂದರು.ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರಿಗೆ ಲೋಕಾಯುಕ್ತ ಸಂಸ್ಥೆ ಮತ್ತೊಮೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್ ನಿರಾಕರಿಸಿ ನಿರ್ಗಮಿಸಿದರು.