Thursday, September 19, 2024
Homeಇದೀಗ ಬಂದ ಸುದ್ದಿನನ್ನ ವಿರುದ್ಧ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ : ಹೆಚ್ಡಿಕೆ ಆರೋಪ

ನನ್ನ ವಿರುದ್ಧ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ : ಹೆಚ್ಡಿಕೆ ಆರೋಪ

ಬೆಂಗಳೂರು,ಆ.21- ರಾಜ್ಯ ಕಾಂಗ್ರೆಸ್ ಸರ್ಕಾರದ ವರ್ಗಾವಣೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಧ್ವನಿಯೆತ್ತಿದ್ದಕ್ಕಾಗಿ ತಮ್ಮ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದ್ದು, ಅಭಿಯೋಜನೆಗೆ ಅನುಮತಿ ಪಡೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಆಗ ಬೆಂಬಲ ಕೊಟ್ಟಿದ್ದ ಬಿಜೆಪಿಯ ವಿಧಾನಪರಿಷತ್ ಸದಸ್ಯರೊಬ್ಬರು ತಮ್ಮ ವಿರುದ್ಧ ಗಣಿ ಹಗರಣದ ಆರೋಪ ಮಾಡಿದ್ದರು. ಅದರ ಕುರಿತು ತನಿಖೆ ನಡೆಸಿದ ಲೋಕಾಯುಕ್ತ ಸಂಸ್ಥೆ ಹಲವಾರು ಟ್ರಂಕ್ಗಳಲ್ಲಿ ದಾಖಲೆಗಳನ್ನು ತಂದಿದ್ದನ್ನು ಎಲ್ಲರೂ ಗಮನಿಸಿದ್ದೇವೆ ಎಂದರು.

ಜಂತಕಲ್ ಮೈನಿಂಗ್ ಮತ್ತು ಸಾಯಿ ವೆಂಕಟೇಶ್ವರ ಸಂಸ್ಥೆಗೆ ಗಣಿ ಪರವಾನಗಿ ನೀಡಿದ್ದು ಮತ್ತು ಒಂದೆರೆಡು ಡಿ ನೋಟಿಫಿಕೇಶನ್ ಪ್ರಕರಣಗಳ ಕುರಿತು ತನಿಖೆಗೆ ತಮ್ಮ ಕಾಲಾವಧಿಯಲ್ಲೇ ಆದೇಶ ಹೊರಡಿಸಲಾಗಿತ್ತು. ಇದ್ಯಾವುದೂ ಕಾಂಗ್ರೆಸ್ ಸರ್ಕಾರದ ಕಾಲದಲ್ಲಾದ ತನಿಖೆಗಳಲ್ಲ ಎಂದರು.

ಗಣಿ ಪ್ರಕರಣಗಳ ಕುರಿತು ಲೋಕಾಯುಕ್ತರು ನೀಡುವ ಮೂರು ಮಾಜಿ ಮುಖ್ಯಮಂತ್ರಿಗಳ ಹೆಸರುಗಳು ಇವೆ. ಹಳೆ ಪ್ರಕರಣವನ್ನು ಕೆದಕುವುದರ ಹಿಂದೆ ಕಾಂಗ್ರೆಸ್ನ ದ್ವೇಷದ ರಾಜಕಾರಣ ಅಡಗಿದೆ.

ಸರ್ಕಾರ ರಚನೆಯಾದ ಹೊಸದರಲ್ಲಿ ನಡೆಯುತ್ತಿದ್ದ ವರ್ಗಾವಣೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ನಾನು ದೊಡ್ಡ ದನಿಯಲ್ಲಿ ಆರೋಪ ಮಾಡಿದ್ದೆ. ಈ ಹಿಂದೆ 2023 ರ ಸೆಪ್ಟೆಂಬರ್ನಲ್ಲಿ ಲೋಕಾಯುಕ್ತ ಎಸ್ಐಟಿ ಅಭಿಯೋಜನೆಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಈಗ ಮತ್ತೊಮೆ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ತಮ್ಮ ವಿರುದ್ಧ ಕೇಳಿಬಂದಿದ್ದ 150 ಕೋಟಿ ರೂ.ಗಳ ಹಗರಣ ಹಾಗೂ ಜಂತಕಲ್ ಮೈನಿಂಗ್ಗೆ ಪರವಾನಗಿ ನೀಡಿದ್ದ ಎರಡು ಪ್ರಕರಣಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಸಾಯಿ ವೆಂಕಟೇಶ್ವರ ಸಂಸ್ಥೆಗೆ ಅನುಮತಿ ನೀಡಿದ್ದ ವಿಚಾರದ ತನಿಖೆಗೆ ಬಾಕಿ ಉಳಿದಿದೆ. 2014 ರಲ್ಲಿ ಇದನ್ನು ಸುಪ್ರೀಂಕೋರ್ಟ್ನಲ್ಲಿ ಮೇಲನವಿ ಸಲ್ಲಿಸಿದೆ.

ಆಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ವಿಶೇಷ ತನಿಖಾ ದಳ ರಚನೆಗೆ ಅವಕಾಶ ನೀಡುವಂತೆ ರಾಜ್ಯಸರ್ಕಾರ ಸುಪ್ರೀಂಕೋರ್ಟ್ಗೆ ಮೇಲನವಿ ಸಲ್ಲಿಸಿದೆ. 2014ರ ಫೆ.3 ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಎಸ್.ಎಂ.ಕೃಷ್ಣ ಅವರ ಪ್ರಕರಣದ ಜೊತೆ ಈ ಅರ್ಜಿಯನ್ನು ವಿಚಾರಣೆ ನಡೆಸುವಂತೆ ಆದೇಶಿಸಿತ್ತು ಎಂದರು.

ಇದೇ ಪ್ರಕರಣದಲ್ಲಿ ಎಸ್.ಎಂ.ಕೃಷ್ಣ ಸಲ್ಲಿಸಿದ್ದ ಮೇಲನವಿಯನ್ನು ಪರಿಗಣಿಸಿ ಸುಪ್ರೀಂಕೋರ್ಟ್ ವಿನಾಯಿತಿ ನೀಡಿದೆ. ಧರ್ಮಸಿಂಗ್ ವಿರುದ್ಧವೂ ಕೆಲ ಆರೋಪಗಳಿದ್ದವು ಎಂದು ಹೇಳಿದರು. ನನ್ನನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಬೇಕು ಎಂಬ ಕಾರಣಕ್ಕೆ 2017 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು ಎಂದು ವಿವರಿಸಿದರು.

ಈ ಪ್ರಕರಣದಲ್ಲಿ ಎಸ್.ಎಂ.ಕೃಷ್ಣ ಅವರಿಗೆ ನೀಡಿದ್ದ ತಡೆಯಾಜ್ಞೆಯೇ ಮುಂದುವರೆದಿದೆ. ಈ ಪ್ರಕರಣದಲ್ಲಿ ತನಿಖೆಗೆ ಎಸ್ಐಟಿ ನನಗೆ ನೋಟೀಸ್ ನೀಡಿತ್ತು. ನಾನು ನೇರವಾಗಿ ಎಸ್ಐಟಿ ಮುಂದೆ ಹಾಜರಾಗಲು ನಿರ್ಧರಿಸಿದ್ದೆ. ಆದರೆ ತಮ ವಕೀಲರ ಸಲಹೆ ಮೇರೆಗೆ ಜಾಮೀನು ಪಡೆದು ಎಸ್ಐಟಿ ಮುಂದೆ ಹಾಜರಾದೆ.

ಆಗ ಎಸ್ಐಟಿ ಅಧಿಕಾರಿಗಳು ಹೇಳಿದ್ದ ವಿಚಾರ ಎಂದರೆ, ನೀವು ಜಾಮೀನು ಪಡೆಯುವ ಅಗತ್ಯವಿರಲಿಲ್ಲ. ನಾವು ಹೇಳಿಕೆ ಮಾತ್ರ ದಾಖಲಿಸುತ್ತಿದ್ದೆವು ಎಂದಿದ್ದರು. ಅಂದು ಹೇಳಿಕೆ ನೀಡಿ ನಾನು ವಾಪಸ್ ಬಂದೆ. ಅನಂತರ ತನಿಖೆಯ ಅಧಿಕಾರಿ ಕುಮಾರಸ್ವಾಮಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾಗಿ ಕಡತದಲ್ಲಿ ಉಲ್ಲೇಖಿಸಿದ್ದಾರೆ ಎಂದು ಕಿಡಿಕಾರಿದರು.

ಎಸ್ಐಟಿ ತನಿಖೆಗೆ ಅನುಮತಿ ನೀಡುವಾಗ ಸುಪ್ರೀಂಕೋರ್ಟ್ ಪ್ರಕರಣದ ವಿವರಗಳನ್ನು ಕಾಲಕಾಲಕ್ಕೆ ತನಗೆ ನೀಡಬೇಕು ಎಂದು ಸೂಚಿಸಿತ್ತು. ತನಿಖೆ ನಡೆಸಿದವರು ಸುಪ್ರೀಂಕೋರ್ಟ್ಗೆ ತನಿಖಾ ವರದಿಯನ್ನು ಸಲ್ಲಿಸಿದ್ದಾರೆಯೇ? ಏಕೆ ನೀಡಿಲ್ಲ? ರಾಜ್ಯಪಾಲರ ಮುಂದೆ ಅಭಿಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯವೇನು? ಎಂದು ಪ್ರಶ್ನಿಸಿದರು.

ಒಂದು ದಿನವಾದರೂ ಕುಮಾರಸ್ವಾಮಿಯನ್ನು ಜೈಲಿಗೆ ಕಳುಹಿಸಬೇಕು ಎಂದು ಈಗಿನಂತೆ ಆಗಲೂ ಸಂಚುಗಳು ನಡೆದಿದ್ದವು. ಆ ವೇಳೆ ಮುಖ್ಯಮಂತ್ರಿಯವರು ನಿವೃತ್ತ ಪೊಲೀಸ್ ಅಧಿಕಾರಿಯನ್ನು ಸಲಹೆಗಾರರನ್ನಾಗಿ ಇಟ್ಟುಕೊಂಡಿದ್ದರು. ಈಗ ಕಾನೂನು ತಜ್ಞರನ್ನು ಜೊತೆಗಿಟ್ಟುಕೊಂಡಿದ್ದಾರೆ. ನನ್ನ ವಿರುದ್ಧ ಆರೋಪಗಳ ಜೊತೆಗೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

2018 ರ ಜನವರಿಯಲ್ಲಿ ಎಸ್ಐಟಿ ಚಾರ್ಜ್ಶೀಟ್ ಹಾಕಿತ್ತು. ಅನಂತರ ನನ್ನನ್ನೇ ಮುಖ್ಯಮಂತ್ರಿ ಮಾಡಿ ನನ್ನ ಜೊತೆ ಸರ್ಕಾರ ಮಾಡಬೇಕಾದಂತಹ ಪರಿಸ್ಥಿತಿ ಕಾಂಗ್ರೆಸ್ನವರಿಗೆ ಎದುರಾಯಿತು ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯನವರು ನನ್ನದು ತೆರೆದ ಪುಸ್ತಕ. ನಾನು ಮುಖ್ಯಮಂತ್ರಿಯಾಗಿರುವುದನ್ನು ವಿರೋಧಪಕ್ಷಗಳಿಗೆ ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ಆರೋಪ ಮಾಡುತ್ತಿವೆ ಎಂದು ದಿನನಿತ್ಯ ಭಜನೆ ಮಾಡುತ್ತಿದ್ದಾರೆ. ನೀವು ಸರಿ ಇದ್ದರೆ ವಿರೋಧಪಕ್ಷದವರು ಏನು ಮಾಡುತ್ತಾರೆ. ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತದಲ್ಲಿ 61 ಪ್ರಕರಣಗಳು ಭ್ರಷ್ಟಾಚಾರ, ಕರ್ತವ್ಯ ಲೋಪ ಸೇರಿ ವಿವಿಧ ಪ್ರಕರಣಗಳು ದಾಖಲಾಗಿವೆ.

ಅವುಗಳಲ್ಲಿ 50 ಪ್ರಕರಣಗಳಲ್ಲಿ ಇನ್ನೂ ತನಿಖೆಯೇ ಶುರುವಾಗಿಲ್ಲ. ತಮನ್ನು ತಾವು ಪ್ರಶ್ನೆ ಮಾಡಿಕೊಳ್ಳಲು ಲೋಕಾಯುಕ್ತದ ನರ ಕಿತ್ತು ಹಾಕಿ ಸಿದ್ದರಾಮಯ್ಯ ಅವರು ಎಸಿಬಿ ರಚನೆ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದ್ದರು.

2011-12ನೇ ಸಾಲಿನ ಪ್ರಕರಣವನ್ನು ಈಗ ಕೆದಕಿಕೊಂಡು ಕುಳಿತಿದ್ದಾರೆ. 2018 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎರಡು ಸೆಕೆಂಡಿನಲ್ಲಿ ಮುಚ್ಚಿಹಾಕಿಸಬಹುದಿತ್ತು. ಸಿದ್ದರಾಮಯ್ಯ ಅವರಂತೆ ನಾನು ಸಂಖ್ಯಾಬಲವನ್ನು ಬಳಸಿಕೊಂಡು ರಕ್ಷಣೆ ಪಡೆಯುವ ಪ್ರಯತ್ನ ಮಾಡುವುದಿಲ್ಲ ಎಂದರು.

ಕಳೆದೆರಡು ದಿನಗಳಿಂದ ಮತ್ತೊಂದು ಹೊಸ ಪ್ರಕರಣವನ್ನು ತೆರೆಯಲು ಸಭೆಗಳಾಗಿವೆ. ಡಿವೈಎಸ್ಪಿ ಬಸವರಾಜು ಮುಗ್ಧಂ ಎಂಬುವರು ಇದನ್ನು ನನಗೆ ಬಿಟ್ಟುಕೊಡಿ, ನೋಟೀಸ್ ಕೊಟ್ಟು ಕುಮಾರಸ್ವಾಮಿಯವರನ್ನು ಕರೆಸಿ ಮುಜುಗರ ಉಂಟುಮಾಡುತ್ತೇನೆ ಎಂದಿದ್ದಾರೆ. ಇಂತಹುದಕ್ಕೆಲ್ಲಾ ನಾನು ಹೆದರುವುದಿಲ್ಲ ಎಂದು ಹೇಳಿದರು.

RELATED ARTICLES

Latest News