Sunday, April 28, 2024
Homeರಾಜ್ಯನಾಯಕತ್ವದ ಬದಲಾವಣೆ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ : ಡಿ.ಕೆ.ಸುರೇಶ್

ನಾಯಕತ್ವದ ಬದಲಾವಣೆ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ : ಡಿ.ಕೆ.ಸುರೇಶ್

ಬೆಂಗಳೂರು,ಫೆ.17- ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ನಾಯಕತ್ವದ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲೋಕಸಭೆ ಚುನಾವಣೆ ಬಳಿಕವೂ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರಲಿದೆ.

ಮಹಾರಾಷ್ಟ್ರದಂತೆ ಇಲ್ಲಿ ಅಜಿತ್ ಪವಾರ್ ಆಗಲಿ, ಅಶೋಕ್ ಚೌವ್ಹಾಣ್ ಆಗಲಿ ಕಂಡುಬರುವುದಿಲ್ಲ, ಅಂತಹ ಸಾಧ್ಯತೆಯೂ ಇಲ್ಲ. ಕಾಂಗ್ರೆಸ್ ಸರ್ಕಾರ 5 ವರ್ಷ ಅವಧಿಯನ್ನು ಪೂರ್ಣಗೊಳಿಸುತ್ತದೆ. ಮತ್ತೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.ರಾಜ್ಯದ ಜನ ಕಾಂಗ್ರೆಸ್‍ಗೆ 135 ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಮುಖರಾದ ರಾಹುಲ್‍ಗಾಂಧಿ, ಸೋನಿಯಾಗಾಂಧಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ವಿರೋಧಪಕ್ಷಗಳ ನಾಯಕರಿಗೆ ಅಧಿಕಾರ ಕಳೆದುಕೊಂಡು ನಿದ್ರೆ ಬರುತ್ತಿಲ್ಲ. ಅದಕ್ಕಾಗಿ ದಿನ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಸಿಡಿ ಬಿಡುಗಡೆ ಎಂದೆಲ್ಲಾ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ, ಸರ್ಕಾರ ಪತನವಾಗಲಿದೆ ಎಂಬ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್-ಬಿಜೆಪಿಯಲ್ಲಿ ಚಲನಚಿತ್ರ ನಿರ್ಮಾಪಕರು ಹೆಚ್ಚಾಗಿದ್ದಾರೆ. ನಿರ್ದೇಶಕರು, ಕಥೆ ಬರೆಯುವವರ ಪ್ರಮಾಣವೂ ಹೆಚ್ಚಾಗಿದೆ. ಅದಕ್ಕಾಗಿ ರಾಜಕೀಯವಾಗಿ ದಿನಕ್ಕೊಂದು ಹೊಸಹೊಸ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ದಾಖಲೆಯ ಮತದಾನ

ಕೇಂದ್ರ ಸರ್ಕಾರ ದೆಹಲಿಯಲ್ಲಿ ರೈತರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂದು ಎಲ್ಲರೂ ನೋಡಿದ್ದಾರೆ. ಪಾಕಿಸ್ತಾನ-ಭಾರತದ ಗಡಿಗಿಂತಲೂ ತೀವ್ರವಾಗಿ ಮುಳ್ಳಿನ ಬೇಲಿ ಹಾಕಿ ಅಶ್ರವಾಯು ಸಿಡಿಸಿ ರೈತರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಇದನ್ನು ಪ್ರತಿಯೊಬ್ಬರೂ ಗಮನಿಸುತ್ತಿದ್ದಾರೆ. ರೈತರು ನ್ಯಾಯಯುತ ಬೇಡಿಕೆಗಳನ್ನಿಡುತ್ತಿದ್ದಾರೆ ಅದನ್ನು ಈಡೇರಿಸುವ ಬದಲು ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಜನರಿಗಿರುವ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ದೂರಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸ್ರ್ಪಧಿಸುವುದಾದರೆ ಸ್ವಾಗತಿಸುತ್ತೇನೆ. ಈ ಹಿಂದೆ ಅವರು ಎರಡು ಬಾರಿ ಸಂಸದರಾಗಿದ್ದರು. ಅವರ ನಿರ್ಗಮನದ ಬಳಿಕ ನಾನು ಆಯ್ಕೆಯಾಗಿದ್ದೇನೆ. ನಮ್ಮ ಪಕ್ಷ ನನಗೆ ಮರಳಿ ಸ್ರ್ಪಸಲು ಸೂಚನೆ ನೀಡಿದರೆ ನಾನು ಚುನಾವಣೆಯನ್ನು ಎದುರಿಸಲು ಬೇಕಾದ ತಂತ್ರಗಾರಿಕೆಯನ್ನು ಸಿದ್ಧಮಾಡಿಕೊಳ್ಳುತ್ತೇನೆ. ಕುಮಾರಸ್ವಾಮಿಯವರ ಸ್ಪರ್ಧೆಯನ್ನು ನಾನು ಸವಾಲು ಎಂದು ಸ್ವೀಕರಿಸುತ್ತಿಲ್ಲ. ರಾಜಕೀಯ ಹೋರಾಟ ಎಂದು ಪರಿಗಣಿಸುವುದಾಗಿ ಹೇಳಿದರು.

ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಹಾಗೆಂದು ನಾನು ದೇಶ ವಿಭಜನೆಯ ಮಾತುಗಳನ್ನಾಡಿಲ್ಲ. ತೆರಿಗೆ ಪಾಲಿನ ಅನ್ಯಾಯದ ಬಗ್ಗೆ ತಮಿಳುನಾಡಿನಲ್ಲಿ ಮೊದಲಿನಿಂದಲೂ ವಿರೋಧವಿದೆ. ಪ್ರಧಾನಿಯವರು ಪ್ರತಿನಿಧಿಸುತ್ತಾರೆ ಎಂಬ ಕಾರಣಕ್ಕೆ ಉತ್ತರ ಪ್ರದೇಶಕ್ಕೆ ಮತ್ತು ಪ್ರಧಾನಿಯವರ ತವರೂರು ಎಂಬ ಕಾರಣಕ್ಕೆ ಗುಜರಾತ್‍ಗೆ ಹೆಚ್ಚಿನ ಹಣ ಅನುದಾನ ಮತ್ತು ತೆರಿಗೆ ಪಾಲು ನೀಡಲಾಗುತ್ತಿದೆ. ಉತ್ತರಭಾರತದ ಮಧ್ಯಪ್ರದೇಶ, ಬಿಹಾರ ರಾಜ್ಯಗಳು ನಮಗಿಂತಲೂ ಹೆಚ್ಚಿನ ಹಣ ಪಡೆಯುತ್ತಿವೆ. ಇದರ ವಿರುದ್ಧ ಧ್ವನಿಯೆತ್ತುವುದು ಹೇಗೆ ದೇಶ ವಿರೋಧಿಯಾಗುತ್ತದೆ ಎಂದು ಪ್ರಶ್ನಿಸಿದರು.

ಬಿಬಿಎಂಪಿ ಕೇಳಿದ್ದು 8050 ಕೋಟಿ ರೂ. ಸಿಕ್ಕಿದ್ದು 3500 ಕೋಟಿ ರೂ

ಮಾಜಿ ಸಚಿವ ಈಶ್ವರಪ್ಪನವರು ಗುಂಡಿಕ್ಕಿ ಕೊಲ್ಲುವಂತೆ ನೀಡಿರುವ ಹೇಳಿಕೆ ಅವರ ಹಿಂಬಾಲಕರನ್ನು ಪ್ರಚೋದಿಸಿ ಅನಾಹುತವಾದರೆ ಬಡವರ ಮಕ್ಕಳು ತೊಂದರೆಗೆ ಸಿಲುಕುತ್ತಾರೆ, ಅದಕ್ಕಾಗಿ ನಾನೇ ನೇರವಾಗಿ ಈಶ್ವರಪ್ಪ ಅವರನ್ನು ಭೇಟಿ ಮಾಡುತ್ತೇನೆ. ನನಗೆ ಗುಂಡಿಕ್ಕುವುದರಿಂದ ಅಥವಾ ಎರಡೇಟು ಹೊಡೆಯುವುದರಿಂದ ಈಶ್ವರಪ್ಪ ಅವರಿಗೆ ಒಳ್ಳೆಯದಾಗುತ್ತದೆ. ರಾಜಕೀಯವಾಗಿ ನಿರುದ್ಯೋಗಿಯಾಗಿರುವ ಅವರಿಗೆ ರಾಜ್ಯಪಾಲರ ಹುದ್ದೆ ದೊರೆಯುತ್ತದೆ ಎಂದರೆ ನನಗೆ ಸಂತೋಷ ಎಂದು ಹೇಳಿದರು.

RELATED ARTICLES

Latest News