ಬೆಂಗಳೂರು : ಕೊಟ್ಟ ಸಾಲ ವಾಪಾಸ್ ಕೇಳಿದ ಕಾರಣಕ್ಕೆ ಬಿಜೆಪಿ ಮುಖಂಡನ ವಿರುದ್ಧ ದೈಹಿಕ ಹಾಗೂ ಮಾನಸಿಕ ಕಿರುಕುಳದ ಸುಳ್ಳು ದೂರು ನೀಡಿದ ಬಳ್ಳಾರಿ ಮೂಲದ ವೈದ್ಯೆ ಡಾ.ಶಶಿಕಲಾ ಹೊನ್ನಾಳಿ ಎಂಬವರಿಗೆ ಹೈಕೋರ್ಟ್ ಪೀಠ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದೆ.
ಬಳ್ಳಾರಿ ಜಿಲ್ಲೆಯ ಹೊನ್ನಾಳಿ ಗ್ರಾಮದ ಡಾ.ಶಶಿಕಲಾ ಹೊನ್ನಾಳಿ ಅವರ ಈ ವರ್ತೆನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಸಿವಿಲ್ ಸ್ವರೂಪದ ಈ ಪ್ರಕರಣಕ್ಕೆ ಅನಗತ್ಯವಾಗಿ ಕ್ರಿಮಿನಲ್ ರೂಪ ನೀಡಲಾಗಿದೆ. ಇದೊಂದು ಉತ್ಪೇಕ್ಷೆ ಹಾಗೂ ಕಟ್ಟುಕತೆಯಿಂದ ಕೂಡಿದ ಪ್ರಕರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದೂರುದಾರರ ವಿರುದ್ಧ ಹಣದ ಬೇಡಿಕೆಗಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಬೆದರಿಕೆ ಹಾಗೂ ಒತ್ತಡ ತಂತ್ರವನ್ನು ಅನುಸರಿಸಿರುವುದು ಕಂಡು ಬರುತ್ತಿದೆ ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಿದೆ.
ಅರ್ಜಿದಾರರು ದೂರುದಾರರ ಜತೆಗೆ ಪಾಲುದಾರಿಕೆಯಲ್ಲಿ ಪ್ರಾರಂಭಿಸಿದ ಕಂಪನಿಯೊಂದರಲ್ಲಿ ನಿರ್ದೇಶಕರಾಗಿದ್ದರು. ವ್ಯಾಪಾರ ಉದ್ದೇಶಕ್ಕಾಗಿಯೇ ವೈದ್ಯೆ ಶಶಿಕಲಾ ಹೊನ್ನಾಳಿ ಸಾಲ ಪಡೆದಿದ್ದರು. ಕೊಟ್ಟ ಸಾಲ ವಾಪಾಸ್ ಕೇಳಿದ ಕಾರಣಕ್ಕಾಗಿ “ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆʼ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಹೈಕೋರ್ಟ್ ಧಾರವಾಡ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಒತ್ತಡದ ಮೂಲಕ ಸಿವಿಲ್ ಪ್ರಕರಣಕ್ಕೆ ಕ್ರಿಮಿನಲ್ ಸ್ವರೂಪ ನೀಡಿದ್ದು ತಪ್ಪೆಂದು ಡಾ.ಶಶಿಕಲಾಗೆ ಛೀಮಾರಿ ಹಾಕಿ ಪ್ರಕರಣ ವಜಾಗೊಳಿಸಿದೆ. ಸುಳ್ಳು ಪ್ರಕರಣ ದಾಖಲಿಸಿದ ಶಶಿಕಲಾ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನಹಾನಿ ಹಾಗೂ ಸಾಲ ವಸೂಲಾತಿಗೆ ದಾವೆ ಹೂಡಲಾಗಿದೆ.