ಬೆಂಗಳೂರು,ಏ.26- ಮತದಾನ ಮಾಡಲು ಬೆಳಗ್ಗೆಯೇ ಬಂದಿದ್ದ ಮಹಿಳೆಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ನಿತ್ರಾಣಗೊಂಡಿದ್ದಾಗ ವೈದ್ಯ ರೊಬ್ಬರು ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ.ಜೆಪಿನಗರ 8ನೇ ಹಂತದ ಜಂಬೂ ಸವಾರಿ ದಿಣ್ಣೆ ಬಳಿಯ ಮತಗಟ್ಟೆಗೆ ಬಂದಿದ್ದ 50 ವರ್ಷದ ಮಹಿಳೆ ನೀರು ಕುಡಿಯಲು ಹೋದಾಗ ಏಕಾಏಕಿ ಕುಸಿದು ಬಿದ್ದು ನಿತ್ರಾಣಗೊಂಡರು.
ಅದೇ ಸಮಯದಲ್ಲಿ ಮತದಾನ ಮಾಡಲು ಆಗಮಿಸಿದ್ದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ವೈದ್ಯ ಡಾ.ಗಣೇಶ ಶ್ರೀನಿವಾಸ್ ಪ್ರಸಾದ್ ಅವರು ಆ ಮಹಿಳೆಯನ್ನು ಗಮನಿಸಿದ್ದಾರೆ. ತಕ್ಷಣ ಆ ಮಹಿಳೆ ಬಳಿ ಹೋಗಿ ನಾಡಿಮಿಡಿತ ಪರಿಶೀಲಿಸಿದಾಗ ಆರೋಗ್ಯದಲ್ಲಿ ಏರುಪೇರಾಗಿರುವುದು ಗಮನಕ್ಕೆ ಬಂದಿದೆ.
ಮಹಿಳೆ ದೇಹ ಸಹ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದಿದ್ದಾಗ ತಕ್ಷಣ ಸಿಪಿಆರ್ ಮಾಡಿದಾಗ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತು. ಆ ವೇಳೆ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಜ್ಯೂಸ್ ನೀಡಿದರು. ಬಳಿಕ ಆ್ಯಂಬುಲೆನ್‌್ಸಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಮಹಿಳೆಯನ್ನು ಆಸ್ಪತ್ರೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಮಹಿಳೆಯ ಪ್ರಾಣ ಉಳಿದಿದೆ.
ವೈದ್ಯರ ಪ್ರತಿಕ್ರಿಯೆ:
ಮತದಾನ ಮಾಡಲು ನಾನು ಬಂದಿದ್ದಾಗ ಮಹಿಳೆ ಕುಸಿದು ಬೀಳುತ್ತಿದ್ದುದನ್ನು ಗಮನಿಸಿದೆ. ತಕ್ಷಣ ಅವರ ನೆರವಿಗೆ ಧಾವಿಸಿ ಹೃದಯ ಶ್ವಾಸಕೋಶದ ಪುನರುಜ್ಜೀವನ(ಸಿಪಿಆರ್) ಮಾಡಿದ್ದರಿಂದ ಸ್ವಲ್ಪ ಸುಧಾರಿಸಿಕೊಂಡರು. ಒಂದು ವೇಳೆ ವಿಳಂಬವಾಗಿದ್ದರೆ ಆ ಮಹಿಳೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿತ್ತು ಎಂದು ವೈದ್ಯರಾದ ಡಾ.ಗಣೇಶ ಶ್ರೀನಿವಾಸ್ ಪ್ರಸಾದ್ ಅವರು ಪ್ರತಿಕ್ರಿಯಿಸಿದ್ದಾರೆ.