Tuesday, May 7, 2024
Homeಮನರಂಜನೆಸಂಭ್ರಮದಿಂದ ಮತದಾನ ಮಾಡಿದ ಸ್ಯಾಂಡಲ್‌ವುಡ್‌ ಮಂದಿ

ಸಂಭ್ರಮದಿಂದ ಮತದಾನ ಮಾಡಿದ ಸ್ಯಾಂಡಲ್‌ವುಡ್‌ ಮಂದಿ

ಜೆ.ಪಿ.ನಗರ, ಕೊಡಿಗೆಹಳ್ಳಿ, ಯಲಹಂಕದ ಜ್ಯೂಡಿಯೆಷಲ್‌ ಲೇಔಟ್‌ನ ಮತಗಟ್ಟೆಗಳಲ್ಲಿ ಸಪ್ತಮಿಗೌಡ, ಚೈತ್ರಾ ಆಚಾರ್‌, ರಾಗಿಣಿ ಮತದಾನ ಮಾಡಿದರು. ಇದೇ ವೇಳೆ ನಟಿಯರಾದ ನಿಧಿಸುಬ್ಬಯ್ಯ ಹಾಗೂ ಶ್ವೇತಾ ಶ್ರೀವಾಸ್ತವ ಅವರು ಕೂಡ ತಮ ಹಕ್ಕು ಚಲಾಯಿಸಿ ಮತದಾರರಲ್ಲಿ ಜಾಗೃತಿ ಮೂಡಿಸಿದರು.

ಕುಟುಂಬದೊಂದಿಗೆ ಮತದಾನ ಮಾಡಿದ ಡಾಲಿ ಧನಂಜಯ್‌
ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆ ಸಂಬಂಧ ತಮ್ಮ ಮತದಾನದ ಹಕ್ಕು ಚಲಾಯಿಸಿದರೆ, ನಟ ಧನಂಜಯ್‌ ಅವರು ತಮ್ಮ ಹುಟ್ಟೂರಾದ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿಹಟ್ಟಿಯಲ್ಲಿ ಕುಟುಂಬ ಸಮೇತರಾಗಿ ಮತದಾನದ ಕಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಸಂಪ್ರದಾಯ ತೊಡುಗೆಯಾದ ಬಿಳಿ ಪಂಚೆ ಹಾಗೂ ಶರ್ಟ್‌ ಧರಿಸಿದ ಮತಗಟ್ಟೆಗೆ ತೆರಳಿದ ಡಾಲಿ ಧನಂಜಯ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಪ್ರತಿಯೊಬ್ಬರು ಮತದಾನ ಮಾಡಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿ ಪ್ರಜಾಪ್ರಭುತ್ವದ ಮಹತ್ವವನ್ನು ಸಾರಿದ್ದಾರೆ.

ಎಕ್ಸಾಂ ಬರೆಸಲ್ಲ ಮತದಾನ ಮಾಡಿ
ಲೋಕಸಭೆ ಚುನಾವಣೆಯಲ್ಲಿ ಇಂದು ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಹಿರಿಯ ನಾಗರೀಕರು ಬಲು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದರೆ, ಯುವ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ತೊಡಗಿಸಿಕೊಳ್ಳಲು ಹಿಂಜರಿಕೆ ತೋರಿದ್ದಾರೆ.

ಈ ಕುರಿತು ಮಾತನಾಡಿರುವ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಮತಗಟ್ಟೆಯಲ್ಲಿ ಯಾರೂ ನಿಮಗೆ ಪರೀಕ್ಷೆ ಬರೆಯಲು ಹೇಳುವುದಿಲ್ಲ ಯಾವುದೇ ಅಂಜಿಕೆ ಇಲ್ಲದೆ ಮತಗಟ್ಟೆಗೆ ಬಂದು ಮತದಾನ ಮಾಡಿ ಎಂದು ಕರೆ ನೀಡಿದ್ದಾರೆ. ಬಘೀರ ಸಿನಿಮಾದ ಶೂಟಿಂಗ್‌ ವೇಳೆ ಏಟು ಮಾಡಿಕೊಂಡು, ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದರೂ, ಪ್ರಜಾಪ್ರಭುತ್ವದ ಹಬ್ಬದಲ್ಲಿ ತುಂಬಾ ಉತ್ಸಾಹದಿಂದ ಪಾಲ್ಗೊಂಡಿದ್ದ ನಟ ಶ್ರೀಮುರಳಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ತಮ್ಮ ಮನದಾಳದ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

`ಮತದಾನ ನಮ್ಮ ಹಕ್ಕು ಅದನ್ನು ಚಲಾಯಿಸಿದ್ದೇವೆ. ನಮ್ಮ ಬೂತ್‌ ಅಲ್ಲಿ ತುಂಬಾ ಜನ ಇದ್ರು, ನೋಡಿ ತುಂಬಾ ಖುಷಿ ಆಯ್ತು. ಹಿರಿಯ ನಾಗರೀಕರು ಬರ್ತಾ ಇದ್ದಾರೆ. ಪ್ರಜಾಪ್ರಭುತ್ವ ನಾವು ಆಯ್ಕೆ ಮಾಡಿಕೊಳ್ಳೋದು. ಆದರೆ ಇಂತಹ ಪ್ರಕ್ರಿಯೆಯಲ್ಲಿ ಯುವಕರು ಪಾಲ್ಗೊಳ್ಳದೆ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ. ಇಲ್ಲೇನೂ ಎಕ್ಸಾಂ ಬರೆಸಲ್ಲ ಬಂದು ಮತದಾನ ಮಾಡಿ. ನಿಮಗೆ ಬೇಕಾದ ನಾಯಕನನ್ನ ಆಯ್ಕೆ ಮಾಡಿಕೊಳ್ಳಿ. ಯಾರು ಯಾರು ಓಟ್‌ ಮಾಡಿಲ್ಲ ಅವರಿಗೆ ಏನು ಹೇಳಬೇಕು ಮಾಧ್ಯಮ ಮುಂದೆ ನಾನು ಯಾವುದೇ ಕಾರಣಕ್ಕೂ ಮಾತನಾಡುವುದಿಲ್ಲ’ ಎಂದು ಶ್ರೀಮುರಳಿ ಹೇಳಿದರು.

ಯುವ ಪೀಳಿಗೆ ತಪ್ಪದೆ ಮತದಾನ ಮಾಡಿ:ಗಣೇಶ್


ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಂತದ ಲೋಕಸಭೆ ಚುನಾವಣೆಯು ಇಂದು ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಿದ್ದು, ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಟಿಯರು ಕೂಡ ಸಾಮಾನ್ಯ ಜನರಂತೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ಪ್ರತಿ ಮತದಾರರೂ ಕೂಡ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದಾರೆ.

ಮತದಾನ ಮಾಡಿದರೆ ಹೆಚ್ಚು ಬೆಲೆ:
ರಾಜರಾಜೇಶ್ವರಿನಗರದ ಮತಗಟ್ಟೆಯಲ್ಲಿ ಕುಟುಂಬ ಸಮೇತ ಬಂದು ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸುದ್ದಿಗಾರರೊಂದಿಗೆ ಮಾತನಾಡಿ, `ನಾನು ಬೆಳಗ್ಗೆ ಬಂದು ಮತದಾನ ಏಕೆ ಮಾಡಿದ್ದರ ಹಿಂದೆ ನನ್ನನ್ನು ನೋಡಿ ನನ್ನ ಅನುಯಾಯಿಗಳು ಹಾಗೂ ಅಭಿಮಾನಿಗಳು ಮತ ಚಲಾಯಿಸಲಿ ಎಂಬ ಉದ್ದೇಶ ಹೊಂದಿದ್ದೇನೆ. ಮತದಾನ ಮಾಡಿಲ್ಲ ಎಂಬುದಕ್ಕಿಂತ ನನ್ನ ಹಕ್ಕು ಚಲಾಯಿಸಿದೆ ಎಂದು ಹೇಳುವುದು ತುಂಬಾ ಪ್ರಾಮುಖ್ಯತೆ ಪಡೆದಿದೆ. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ’ ಎಂದು ಮನವಿ ಮಾಡಿದ್ದಾರೆ.

ಮತದಾರರ ಉತ್ಸಾಹ ನೋಡಿ ಸಂತಸವಾಯಿತು:


ನಟಿ ಅಮೂಲ್ಯ ಪತಿ ಜಗದೀಶ್‌ ಜೊತೆಗೆ ರಾಜರಾಜೇಶ್ವರಿ ನಗರ ಮತಗಟ್ಟೆಗೆ ಆಗಮಿಸಿದ ಸಾಕಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿರುವುದನ್ನು ಕಂಡು ತುಂಬಾ ಸಂತಸವಾಯಿತು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. `ನಾನು ಮತಗಟ್ಟೆಗೆ ತೆರಳಿದಾಗ ಸಾಕಷ್ಟು ಜನರು ಜಮಾಯಿಸಿದ್ದರು, ನನಗೆ ಪುಟ್ಟ ಪುಟ್ಟ ಮಕ್ಕಳಿರೋದ್ರಿಂದ ಅವರಲ್ಲಿ ಮನವಿ ಮಾಡಿದೆ, ನನಗೆ ಮತದಾರರು ಸಹಕರಿಸಿದ್ದರಿಂದ ಮತದಾನವನ್ನು ಬಲುಬೇಗ ಮಾಡಿದೆ. ಆದರೆ ಅಲ್ಲೇ ಸ್ವಲ್ಪ ಸಮಯ ಕಳೆದ ನಾನು, ಮತದಾನ ಮಾಡುವುದು ನಮ್ಮ ಹಕ್ಕಾಗಿದ್ದು, ತಪ್ಪದೇ ಮತದಾನ ಮಾಡಬೇಕು. ಸಮಯವನ್ನು ವಿನಾ ಕಾರಣ ಕಳೆಯದೆ ಮತಗಟ್ಟೆಗಳಿಗೆ ತೆರಳಿ ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸಬೇಕು. ಈ ಬಾರಿ ಅತಿ ಹೆಚ್ಚು ಮತದಾನವಾಗುವ ಭರವಸೆ ನನಗಿದೆ’ ಎಂದು ಅಮೂಲ್ಯ ಹೇಳಿದ್ದಾರೆ.

ಮತದಾನ ಎಲ್ಲರ ಕರ್ತವ್ಯ:
ಜೆಪಿ ನಗರದ ಸೇಂಟ್‌ ಪೌಲ್‌ ಶಾಲೆಯಲ್ಲಿ ವೋಟ್‌ ಮಾಡಿದ ನಂತರ ಮಾತನಾಡಿದ ಕಾಂತರ ಹಾಗೂ ಯುವ ಚಿತ್ರಗಳ ನಟಿ ಸಪ್ತಮಿಗೌಡ ಅವರು, `ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ, ಮತದಾನ ಮಾಡುವುದು ಎಲ್ಲರ ಕರ್ತವ್ಯವಾಗಿದ್ದು , ತಪ್ಪದೇ ತಮ್ಮ ಹಕ್ಕು ಚಲಾಯಿಸಿ’ ಎಂದು ಮನವಿ ಮಾಡಿದರು. ಚುನಾವಣಾ ರಾಯಭಾರಿಯಾಗಿ ರುವ ರಮೇಶ್‌ ಅರವಿಂದ್‌, ಶಿವರಾಜ್‌ಕುಮಾರ್‌, ಉಪೇಂದ್ರ, ಜಗ್ಗೇಶ್‌, ದರ್ಶನ್‌, ಸುದೀಪ್‌, ಧ್ರುವಸರ್ಜಾ, ಅಜೇಯ್‌ರಾವ್‌ ಸೇರಿದಂತೆ ಹಲವಾರು ಕಲಾವಿದರು ಹಾಗೂ ತಂತ್ರಜ್ಞರು ವೋಟ್‌ ಮಾಡುವ ಮೂಲಕ ಮತದಾನದ ಜಾಗೃತಿ ಮೂಡಿಸಿದರು.

RELATED ARTICLES

Latest News