ಬೆಂಗಳೂರು,ಡಿ.26– ಅಮ್ಮನ ತೋಳಿನಲ್ಲಿದ್ದ ಎರಡು ವರ್ಷದ ಮಗುವಿನ ಮೇಲೆ ನಿಷೇಧಿತ ಪಿಟ್ಬುಲ್ ನಾಯಿ ದಾಳಿ ಮಾಡಿದ್ದು, ಮಗುವಿನ ಸ್ಥಿತಿ ಗಂಭೀರವಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನೇಪಾಳಿ ಮೂಲದ ನಬ್ರಾಜ್-ಅನುಷ್ಕಾ ದಂಪತಿಯ ಎರಡು ವರ್ಷದ ಮಗುವಿನ ಮೇಲೆ ಪಕ್ಕದ ಮನೆಯವರು ಸಾಕಿದ್ದ ಈ ನಾಯಿ ಮೂರು ದಿನಗಳ ಹಿಂದೆ ದಾಳಿ ಮಾಡಿದ್ದು, ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ಕೆಲಸ ಅರಿಸಿಕೊಂಡು ನೇಪಾಳಿ ಕುಟುಂಬ ಬೆಂಗಳೂರಿಗೆ ಬಂದಿದ್ದು, ಬಾಣಸವಾಡಿಯ ಸುಬ್ಬನಪಾಳ್ಯದ ಮನೆಯೊಂದರಲ್ಲಿ ವಾಸವಿದ್ದಾರೆ.
ಅಂದ ಸಂಜೆ ಮಗುವನ್ನು ಎತ್ತಿಕೊಂಡು ಮನೆ ಮುಂದೆ ನಿಂತಿದ್ದಾಗ ಏಕಾಏಕಿ ಪಕ್ಕದ ಮನೆಯ ನಾಯಿ ಮಗುವಿನ ಮೇಲೆ ಹಾರಿ ಭುಜವನ್ನು ಕಚ್ಚಿ ಎಳೆದಿದೆ.
ನಾಯಿಯಿಂದ ತಪ್ಪಿಸಿಕೊಳ್ಳಲು ತಾಯಿ ಯತ್ನಿಸಿದರೂ ಸಾಧ್ಯವಾಗಿಲ್ಲ. ಗಂಭೀರ ಗಾಯಗೊಂಡಿರುವ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಬಗ್ಗೆ ಮಗುವಿನ ತಾಯಿ ಅವರು ನಾಯಿ ಮಾಲೀಕರ ವಿರುದ್ಧ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.