ಬೆಂಗಳೂರು,ಫೆ.8- ಕೋಟ್ಯಾಂತರ ಬೆಲೆ ಬಾಳುವ ಕಾಂಪ್ಲೆಕ್ಸ್ ವಿಚಾರ ವಾಗಿ ಕುಂಬಾರ ಟ್ರಸ್ಟ್ ಪದಾಕಾರಿ ಯನ್ನು ಕೊಲೆ ಮಾಡಿರುವುದು ಹಲಸೂರು ಗೇಟ್ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ವಾಣಿಜ್ಯ ಸಂಕೀರ್ಣದ ವಿಚಾರವಾಗಿ ಈ ಹಿಂದೆಯೂ ಎರಡುಮೂರು ಬಾರಿ ಆರೋಪಿ ಭದ್ರಿ ಹಾಗೂ ಸಂಬಂಕ ಸುರೇಶ್ ನಡುವೆ ಜಗಳ ನಡೆದಿತ್ತು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆ ಸಂದರ್ಭದಲ್ಲಿ ಪೊಲೀಸರು ಇವರಿಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಕೋಟ್ಯಂತರ ಮೌಲ್ಯದ ಕಾಂಪ್ಲೆಕ್ಸ್ ವಿಚಾರದ ವ್ಯಾಜ್ಯ ನ್ಯಾಯಾಲಯದಲ್ಲಿತ್ತು . ಈ ನಡುವೆ ಪತ್ನಿ ತನ್ನಿಂದ ದೂರವಾಗಲು ಸುರೇಶ್ನೇ ಕಾರಣವೆಂದು ಭದ್ರಿ ಭಾವಿಸಿ ಆತನ ವಿರುದ್ಧ ಕೆಂಡಕಾರುತ್ತಿದ್ದನು. ವಾಣಿಜ್ಯ ಸಂಕೀರ್ಣ ವಿಚಾರವಾಗಿ ನ್ಯಾಯಾಲಯದಲ್ಲಿ ವಾದ-ವಿವಾದ ನಡೆದು ನಂತರ ಈ ಕೇಸ್ ಸುರೇಶ್ ಕಡೆ ಆಗಿದ್ದರಿಂದ ಸಂಬಂಕ ಭದ್ರಿ ಮತ್ತಷ್ಟು ಕುಪಿತಗೊಂಡಿದ್ದನು.
ಹೇಗಾದರೂ ಮಾಡಿ ಸುರೇಶ್ ಅವರನ್ನು ಮುಗಿಸಲು ಸಂಚು ರೂಪಿಸಿದ್ದನು. ನಿನ್ನೆ ರಾತ್ರಿ ಸುರೇಶ್ ಅವರು ಕುಂಬಾರಪೇಟೆಯಲ್ಲಿನ ಹರಿ ಅಂಗಡಿ ಮಳಿಗೆಯಲ್ಲಿ ಸ್ನೇಹಿತ ಮಹೇಂದ್ರ ಜೊತೆ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಭದ್ರಿ ಅಂಗಡಿಯೊಳಗೆ ನುಗ್ಗಿ ಚಾಕುವಿನಿಂದ ಚುಚ್ಚಿ ಸುರೇಶ್ ಅವರನ್ನು ಕೊಲೆ ಮಾಡಿದ್ದಾನೆ.
ಗಲಾಟೆ ಬಿಡಿಸಲು ಮಧ್ಯ ಹೋದ ಮಹೇಂದ್ರ ಅವರಿಗೂ ಇರಿಯಲು ಯತ್ನಿಸಿದಾಗ ತಕ್ಷಣ ತಪ್ಪಿಸಿಕೊಳ್ಳಲು ಅವರು ಅಂಗಡಿಯಿಂದ ಹೊರಗೆ ಓಡಿದರೂ ಬಿಡದೆ ಹಿಂಬಾಲಿಸಿಕೊಂಡು ಹೋದಾಗ ಆಯತಪ್ಪಿ ಅಲ್ಲೇ ಇದ್ದ ಕಸದ ಗಾಡಿಗೆ ಬಿದ್ದಿದ್ದಾರೆ. ಆದರೂ ಸಹ ಬಿಡದೆ ಭದ್ರಿ ಚಾಕುವಿನಿಂದ ಮಹೇಂದ್ರ ಅವರಿಗೂ ಇರಿದು ಕೊಲೆ ಮಾಡಿದ್ದಾನೆ.
ಮನಮೋಹನ್ ಸಿನ್ ಸೇವೆಯನ್ನು ಪ್ರಶಂಸಿಸಿದ ಪ್ರಧಾನಿ ಮೋದಿ
ಜನಜಂಗುಳಿ ಪ್ರದೇಶದಲ್ಲಿ ನೋಡನೋಡುತ್ತಿದ್ದಂತೆ ಇಬ್ಬರನ್ನು ಕೊಲೆ ಮಾಡಿದ ಆರೋಪಿ ಭದ್ರಿ ವರ್ತನೆ ಕಂಡು ಸ್ಥಳೀಯರು ಭಯಭೀತಗೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹಲಸೂರು ಗೇಟ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಘಟನೆ ನಡೆದ ಕೆಲವೇ ಸಮಯದಲ್ಲಿ ಆರೋಪಿ ಭದ್ರಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಸುರೇಶ ಹಾಗೂ ಮಹೇಂದ್ರ ಅವರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಇಂದು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.ಆರೋಪಿ ಭದ್ರಿಗೆ ಕೊಲೆ ಮಾಡಲು ಯಾರಾದರೂ ಪ್ರೇರಣೆ ನೀಡಿದ್ದರೇ ಈ ಘಟನೆ ಹಿಂದೆ ಬೇರೆಯಾದರೂ ಇದ್ದಾರೆಯೇ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ಪರಿಶೀಲಿಸಲಾಗಿದೆ, ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.