Sunday, February 25, 2024
Homeರಾಷ್ಟ್ರೀಯಬಿಜೆಪಿಯಿಂದ ಗ್ರಾಮ ಚಲೋ.. : 28 ಸಾವಿರ ಹಳ್ಳಿಗಳಲ್ಲಿ ಅಭಿಯಾನ

ಬಿಜೆಪಿಯಿಂದ ಗ್ರಾಮ ಚಲೋ.. : 28 ಸಾವಿರ ಹಳ್ಳಿಗಳಲ್ಲಿ ಅಭಿಯಾನ

ಬೆಂಗಳೂರು,ಫೆ.8- ಬಿಜೆಪಿ ವತಿಯಿಂದ ನಾಳೆಯಿಂದ ಫೆ.11ರವರೆಗೆ ಗ್ರಾಮ ಚಲೋ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಜಾ್ಯಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು. ಹೆಚ್.ಗೊಲ್ಲಹಳ್ಳಿ ಗ್ರಾಮದಲ್ಲಿ ಗ್ರಾಮ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಹಳ್ಳಿಗಳು, 19 ಸಾವಿರ ನಗರ ಬೂತ್ಗಳಲ್ಲಿ ಒಟ್ಟಾರೆ 42 ಸಾವಿರ ಕಾರ್ಯಕರ್ತರು ಮೂರು ದಿನಗಳ ಕಾಲ ನಿರಂತರವಾಗಿ ಅಭಿಯಾನದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.

ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಸಂಖ್ಯೆ 454, 455ರಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. 2047ನೇ ಇಸವಿಗೆ ಭಾರತವು ವಿಕಸಿತ ಭಾರತವಾಗಿ ಪರಿವರ್ತನೆ ಹೊಂದಬೇಕು, ಭಾರತ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಕಾಣಬೇಕೆಂಬ ಮೋದಿಜೀ ಕನಸು ನನಸಾಗಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ಸಿಗಬೇಕು ಎಂದರು.

ಈ ನಿಟ್ಟಿನಲ್ಲಿ ಗ್ರಾಮ ಚಲೋ ಅಭಿಯಾನವು ಉತ್ತಮ ಅಭಿಯಾನ ಆಗಲಿದೆ. ಈ ಅಭಿಯಾನದ ಮೂಲಕ ಪ್ರತಿ ಗ್ರಾಮ, ಪ್ರತಿ ಮನೆಗೂ ಬಿಜೆಪಿ ಕಾರ್ಯಕರ್ತರು ತಲುಪಲಿದ್ದು, ಕೇಂದ್ರ ಸರಕಾರವು ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಕೊಟ್ಟ ಜನಪರ ಯೋಜನೆಗಳನ್ನು ತಲುಪಿಸಲಾಗುತ್ತದೆ ಎಂದು ತಿಳಿಸಿದರು.

ಈ ಅಭಿಯಾನವು ಬಿಜೆಪಿಗೆ ದೊಡ್ಡ ಶಕ್ತಿಯಾಗಲಿದೆ. ಮೋದಿ ಮತ್ತೊಮ್ಮೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು, ಮೋದಿಜೀ ಅವರು 3ನೇ ಬಾರಿಗೆ ಪ್ರಧಾನಿ ಆಗಬೇಕೆಂಬ ಆಶಯವನ್ನು ಹೊಂದಿ ಗೋಡೆ ಬರಹ ಬರೆಯಲಾಗುವುದು. ದೇಶದ ಪ್ರತಿಯೊಬ್ಬ ನಾಗರಿಕರೂ ಮೋದಿಜೀ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಆಶಿಸುತ್ತಿದ್ದಾರೆ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆಯಾಗಿದೆ. ಫೆ.10ರಂದು ರಾತ್ರಿ ನೇರವಾಗಿ ದೆಹಲಿಯಿಂದ ಮೈಸೂರಿಗೆ ಬರುತ್ತಾರೆ. 11ರ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆದ ನಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಸಂಜೆ ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ ಬಿಜೆಪಿ ಕಾರ್ಯಕರ್ತರ ಸಭೆಯೂ ನಡೆಯಲಿದೆ ಎಂದು ವಿವರಿಸಿದರು.

ಲೋಕಸಭಾ ಚುನಾವಣೆ ಸಂಬಂಧ ಸರ್ವೇ ಫಲಿತಾಂಶವೊಂದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ದೇಶದಲ್ಲಿ ನರೇಂದ್ರ ಮೋದಿ ಪರ ಅಲೆ ಇದ್ದು, ಸಹಜವಾಗಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ದೇಶದ ಜನರಿಗೆ ಮನವರಿಕೆ ಆಗಿದೆ ಎಂದರು.

ಕರ್ನಾಟಕದ ಬೆನ್ನಲ್ಲೇ ದೆಹಲಿಯಲ್ಲಿ ಕೇರಳ, ತಮಿಳುನಾಡು ಪ್ರತಿಭಟನೆ

ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಒಗ್ಗಟ್ಟಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. 28 ಸೀಟುಗಳ ಮತ ಎಣಿಕೆ ಸಂದರ್ಭದಲ್ಲಿ ಒಂದೊಂದು ಸೀಟು ಗೆಲ್ಲಲು ಕೂಡ ಕಾಂಗ್ರೆಸ್ನವರು ಪರಿತಪಿಸುತ್ತಾರೆ. ಅಂಥ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ನಮ್ಮ ಕಾರ್ಯಕರ್ತರು ರಣೋತ್ಸಾಹದಲ್ಲಿದ್ದಾರೆ. ಮೋದಿ ಮತ್ತೊಮ್ಮೆ ಎಂಬ ವಿಷಯದಲ್ಲಿ ಮತದಾರರೂ ಉತ್ಸಾಹದಲ್ಲಿದ್ದಾರೆ. ಬಿಜೆಪಿ- ಜೆಡಿಎಸ್ ಒಗ್ಗಟ್ಟಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.

ರಾಜ್ಯದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯ ಕಾರ್ಯದರ್ಶಿಗಳಾದ ವಿನಯ್ ಬಿದ್ರೆ, ಶರಣು ತಳ್ಳಿಕೆರೆ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್,ಬಿಜೆಪಿ ಮುಖಂಡರು ರುದ್ರೇಶ್ ಈ ಸಂದರ್ಭದಲ್ಲಿದ್ದರು.

RELATED ARTICLES

Latest News