Thursday, May 2, 2024
Homeರಾಜ್ಯಕರ್ನಾಟಕ ಪೊಲೀಸರ ದಕ್ಷತೆ, ಕಾರ್ಯವೈಖರಿಯನ್ನು ಕೊಂಡಾಡಿದ ರಜನೀಶ್ ಗೋಯಲ್

ಕರ್ನಾಟಕ ಪೊಲೀಸರ ದಕ್ಷತೆ, ಕಾರ್ಯವೈಖರಿಯನ್ನು ಕೊಂಡಾಡಿದ ರಜನೀಶ್ ಗೋಯಲ್

ಬೆಂಗಳೂರು,ಏ.2- ಕರ್ನಾಟಕ ಪೊಲೀಸರು ಕಾರ್ಯವೈಖರಿ, ನಿಪುಣತೆ, ದಕ್ಷತೆಯಿಂದ ಇಡೀ ರಾಷ್ಟ್ರದಲ್ಲೇ ಒಳ್ಳೆಯ ಹೆಸರು ಪಡೆದಿದ್ದಾರೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಹೇಳಿದ್ದಾರೆ.

ಕೋರಮಂಗಲದ ಕೆಎಸ್‍ಆರ್‍ಪಿ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಪೊಲೀಸರ ಕಾರ್ಯವೈಖರಿ ಹಾಗೂ ದಕ್ಷತೆ ಬಗ್ಗೆ ನಮಗೆ ಹೆಮ್ಮೆ ಇದ್ದು, ರಾಷ್ಟ್ರದಲ್ಲೇ ಒಳ್ಳೆಯ ಹೆಸರು ಪಡೆದಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೆಲ ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಘಟನೆಯೊಂದರಲ್ಲೇ ಯಾವುದೇ ಪ್ರಮುಖ ಸಾಕ್ಷಿ ಇಲ್ಲದಿದ್ದರೂ ಕೇವಲ ಎರಡು ಬಸ್ ಟಿಕೆಟ್‍ಗಳನ್ನೇ ಆಧರಿಸಿ ಪ್ರಕರಣವನ್ನು ಭೇದಿಸುವಲ್ಲಿ ಸಫಲರಾಗಿದ್ದಾರೆ ಎಂದು ಶ್ಲಾಘಿಸಿದರು.

ಅಪರಾಧ ಪ್ರಕರಣಗಳು ಎಷ್ಟೇ ಜಟಿಲವಾಗಿದ್ದರೂ ಅದನ್ನು ಬಹಳ ಸಫಲವಾಗಿ ನಿಭಾಯಿಸುವಲ್ಲಿ ಪೊಲೀಸ್ ಇಲಾಖೆಯಲ್ಲಿನ ನಾಯಕತ್ವಕ್ಕೆ ನನ್ನ ಅಭಿನಂದನೆಗಳು ಎಂದರು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯನ್ನು ಬಹಳ ಯಶಸ್ವಿಯಾಗಿ ಒಂದೇ ಒಂದು ಮರುಮತದಾನ ನಡೆಯದಂತೆ ನಡೆಸಿಕೊಟ್ಟಿದ್ದೀರಿ. ಇದು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ.

ಈಗ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ. ತಾವೆಲ್ಲರೂ ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಿಕೊಡುತ್ತೀರೆಂದು ನನಗೆ ವಿಶ್ವಾಸವಿದೆ. ಇದಕ್ಕಾಗಿ ಎಲ್ಲರೂ ಶ್ರಮಪಡಬೇಕು ಎಂದು ಅವರು ತಿಳಿಸಿದರು.

ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ರಾಜ್ಯ ಶಾಂತಿ ಯುತವಾಗಿರಬೇಕು. ಅದಕ್ಕಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಪೊಲೀಸರ ಜವಾಬ್ದಾರಿ. ಇದರಿಂದ ನಮ್ಮ ರಾಜ್ಯ ಉನ್ನತೀಕರಣಗೊಂಡು ಅಗ್ರ ಸ್ಥಾನಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

2018ರಿಂದ ಸತತ ಏಳು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ. ಅದಕ್ಕೆ ಅವಕಾಶ ಕೊಟ್ಟ ಭಗವಂತನಿಗೆ ಚಿರ ಋಣಿ. ಗೃಹ ಕಾರ್ಯದರ್ಶಿಯಾಗಿ ತಮ್ಮ ಮುಂದಿರುವ ಸವಾಲುಗಳು, ಕೆಲಸದ ಒತ್ತಡ, ಜವಾಬ್ದಾರಿಯನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದೇನೆ. ಸರ್ಕಾರದ ಮಟ್ಟದಲ್ಲಿ ತಮಗೆ ಬೇಕಾದಂತಹ ಮೂಲಸೌಕರ್ಯಗಳು, ಹೊಸ ವಾಹನಗಳು, ಆಧುನಿಕ ತಂತ್ರಜ್ಞಾನ ಮತ್ತು ಹೊಸ ಸಿಬ್ಬಂದಿಗಳ ನೇಮಕ, ಸಿಬ್ಬಂದಿ ತರಬೇತಿ ಅವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಪೊಲೀಸ್ ಮಹಾನಿರ್ದೇಶಕ ಅಲೋಕ್‍ಮೋಹನ್, ಕೆಎಸ್‍ಆರ್‍ಪಿಯ ಎಡಿಜಿಪಿ ಉಮೇಶ್‍ಕುಮಾರ್ ಮತ್ತು ಹಿರಿಯ-ಕಿರಿಯ ಪೊಲೀಸ್ ಅಕಾರಿಗಳು, ನಿವೃತ್ತ ಪೊಲೀಸ್ ಅಕಾರಿಗಳ ಕುಟುಂಬಸ್ಥರು ಭಾಗವಹಿಸಿದ್ದರು.

RELATED ARTICLES

Latest News