Thursday, May 29, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಕಾಫಿನಾಡಿನಲ್ಲಿ ಮಳೆ ಅಬ್ಬರ, ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಚಾಲಕ ಸಾವು

ಕಾಫಿನಾಡಿನಲ್ಲಿ ಮಳೆ ಅಬ್ಬರ, ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಚಾಲಕ ಸಾವು

Driver dies after tree falls on moving auto

ಚಿಕ್ಕಮಗಳೂರು, ಮೇ 26– ಕಾಫಿನಾಡಿನಾದ್ಯಂತ ಕಳೆದ ಒಂದು ವಾರದಿಂದ ಮಳೆಯಬ್ಬರ ಮುಂದುವರೆದಿದ್ದು, ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಮರವೊಂದು ಬಿದ್ದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಯಪುರ ಸಮೀಪ ಸಂಭವಿಸಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪ ಬೈರೇದೇವರು ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತರನ್ನು ರತ್ನಾಕರ (38) ಎಂದು ಗುರುತಿಸಲಾಗಿದೆ.

ಕೊಪ್ಪ ತಾಲೂಕಿನಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು ಊಟಕ್ಕೆಂದು ಮನೆಗೆ ತೆರಳುವಾಗ ರಸ್ತೆ ಬದಿಯ ಭಾರೀ ಗಾತ್ರದ ಮರವೊಂದು ಆಟೋ ರಿಕ್ಷಾದ ಮೇಲೆ ಉರುಳಿ ಬಿದ್ದಿದೆ. ಆಟೋದ ಮುಂಭಾಗದಲ್ಲೇ ಮರ ಬಿದ್ದಿರುವುದರಿಂದ ಜೀವ ಉಳಿಸಿಕೊಳ್ಳಲು ಚಾಲಕನಿಗೆ ಯಾವುದೇ ಅವಕಾಶವೂ ಸಿಕ್ಕಿಲ್ಲ. ತಕ್ಷಣ ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮರವನ್ನು ಯಂತ್ರಗಳಿಂದ ಕತ್ತರಿಸಿ ತೆರವು ಮಾಡಿದ್ದಾರೆ.

ಮಲೆನಾಡಿನಲ್ಲಿ ಈ ವರ್ಷದ ಮಹಾಮಳೆಗೆ ಇದು ಮೂರನೇ ಬಲಿಯಾಗಿದ್ದು, ಮುಂಗಾರಿಗೆ ಮೊದಲ ಬಲಿಯಾಗಿದೆ. ಇತ್ತೀಚೆಗೆ ಅಜ್ಜಂಪುರ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದರು. ಪೂರ್ವ ಮುಂಗಾರಿನ ಅಬ್ಬರಕ್ಕೆ ಜಿಲ್ಲೆಯು ನಲುಗುತ್ತಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಅಸ್ತವ್ಯಸ್ಥಗೊಂಡು ಮಲೆನಾಡು ತಾಲ್ಲೂಕುಗಳು ಕತ್ತಲಲ್ಲಿ ಮುಳುಗುವಂತಾಗಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜನತೆ ತತ್ತರಿಸುತ್ತಿದ್ದು, ಮನೆಯಿಂದ ಹೊರಕ್ಕೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ನೂರಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದರಿಂದ ತೋಟದ ಮನೆಗಳು, ಕೂಲಿ ಲೈನ್‌ ನಿವಾಸಿಗಳು ಹೊರಗೆ ಬರಲು ಹೆದರುತ್ತಿದ್ದಾರೆ. ಎಲ್ಲಿ ವಿದ್ಯುತ್ ಪ್ರವಾಹ ಉಂಟಾಗುತ್ತದೋ ಎನ್ನುವ ಭೀತಿ ಕಾಡಲಾರಂಭಿಸಿದೆ. ದಿನವಿಡೀ ದಟ್ಟವಾದ ಮಂಜು, ಅಬ್ಬರದ ಮಳೆ, ಭಾರೀ ಬಿರುಸಿನ ಗಾಳಿಯಿಂದಾಗಿ ಕ್ಷಣಕ್ಕೊಂದು ಮರ ಉರುಳಿ ಬೀಳುತ್ತಿದೆ. ನಿರಂತರ ಮಳೆಯಿಂದ ಭೂಮಿ ಸಂಪೂವರ್ಣ ತೇವಗೊಂಡು ವಿದ್ಯುತ್ ಕಂಬಗಳು ಬುಡಮೇಲಾಗುತ್ತಿವೆ. ಹಲವು ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದಿರುವುದರಿಂದ ಕಂಬಗಳು ಒತ್ತಡ ತಾಳಲಾರದೆ ಕುಸಿದು ಬಿದ್ದಿವೆ. ಕೆಲವು ಕಂಬಗಳು ಮುರಿದು ಬಿದ್ದಿವೆ. ತೀವ್ರ ಪ್ರಮಾಣದಲ್ಲಿ ಮಳೆ

ಬೀಳುತ್ತಿರುವುದರಿಂದ ಕಂಬಗಳ ಮರು ಸ್ಥಾಪನೆ, ಲೈನ್‌ಗಳ ದುರಸ್ಥಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಹಲವಾರು ಹಳ್ಳಿಗಳು, ನೂರಾರು ಮನೆಗಳು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ.ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ, ದಿಣ್ಣೆಕೆರೆ, ಕೂದುವಳ್ಳಿ, ತೋರಣಮಾವು, ಕೋಡುವಳ್ಳಿ, ಕೋಟೆವೂರು, ಹುಣಸೇಮಕ್ಕಿ, ಕೆಸರಿಕೆ, ಮುಳ್ಳಾರೆ, ಕಲ್ಲುಗುಡ್ಡೆ, ಕಟ್ಟುಮನೆ, ಹಳ್ಳಿಹಿತ್ತು, ಮಿಂಚೇರಿ ಇನ್ನಿತರೆ ಗ್ರಾಮಗಳು ವಿದ್ಯುತ್ ಕಡಿತಗೊಂಡು ಕತ್ತಲ ಕೂಪವಾಗಿವೆ. ಮೂಡಿಗೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲ್ಲೂಕುಗಳಲ್ಲೂ ಭಾರೀ ಮಳೆ ಗಾಳಿಯಿಂದ ಸಾವಿರಾರು ಕಂಬಗಳು ಉರುಳಿಬಿದ್ದು ಹಲವು ಗ್ರಾಮಗಳಿಗೆ ವಿದ್ಯುತ್ ಕಡಿತ ಉಂಟಾಗಿದೆ. ಮೆಸ್ಕಾಂಗೆ ಬಿಡುವಿಲ್ಲದ ದೂರುಗಳು, ಕರೆಗಳು ಬರುತ್ತಿದ್ದು ಸಿಬ್ಬಂದಿಗಳು ದಿಕ್ಕು ತೋಚಿದಂತಾಗಿದ್ದಾರೆ. ಭಾರೀ ಮಳೆಯಿಂದಾಗಿ ತೋಟಗಳು ಹಾಗೂ ಹಳ್ಳ-ಕೊಳ್ಳಗಳನ್ನು ದಾಟಿಕೊಂಡು ಹೋಗಿ ಲೈನ್‌ಗಳು, ಕಂಬಗಳನ್ನು ದುರಸ್ಥಿ ಮಾಡುವುದು ಸವಾಲಿನ ಕೆಲಸವಾಗಿದ್ದು, ಪರದಾಡುವಂತಾಗಿದೆ. ಕೆಲವು ಗ್ರಾಮಗಳಿಗೆ ಸದ್ಯಕ್ಕೆ ವಿದ್ಯುತ್ ಸಂಪರ್ಕ ಸಿಗುವುದು ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಬಹುತೇಕ ಮನೆಗಳಲ್ಲಿ ಕ್ಯಾಂಡಲ್‌ಗಳು, ದೀಪದ ಬೆಳಕಿನಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ತಾಂತ್ರಿಕ ಕೋರ್ಸ್ಗಳ ಪರೀಕ್ಷೆಗಳು ನಡೆಯುತ್ತಿದ್ದು, ಮನೆಗಳಿಂದ ಓಡಾಡುವ ವಿದ್ಯಾರ್ಥಿಗಳು ಓದಲೂ ಆಗದೇ ಪರೀಕ್ಷಾ ಕೇಂದ್ರಗಳನ್ನು ತಲುಪಲೂ ಆಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ರಾಮಣ್ಣನಗಂಡಿ ಬಳಿ ಕಳೆದ 24 ಗಂಟೆಗಳೊಳಗೆ ಒಂದರ ಹಿಂದೊಂದು ಮೂರು ಕಾರುಗಳು ಪಲ್ಟಿಯಾದ ಘಟನೆ ಉಂಟಾಗಿದೆ. ಭಾರೀ ಮಳೆಯಿಂದಾಗಿ ರಸ್ತೆ ಸ್ಪಷ್ಟವಾಗಿ ಕಾಣದೆ ಚಾಲಕರು ನಿಯಂತ್ರಣ ಕಳೆದುಕೊಂಡು ಈ ಅವಘಡಗಳು ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅವೈಜ್ಞಾನಿಕ ಮತ್ತು ಅಸುರಕ್ಷಿತವಾಗಿದ್ದು, ಇದರಿಂದ ಅಪಘಾತಗಳು ಸಂಭವಿಸುವುದಕ್ಕೆ ಕಾರಣವಾಗುತ್ತಿರುವುದಾಗಿ ಆರೋಪಿಸಿದ್ದಾರೆ. ಹೆದ್ದಾರಿ ಬದಿ ಎಚ್ಚರಿಕೆ ಫಲಕಗಳ ಹಾಗೂ ಸರಿಯಾದ ನಿಕಾಸಿ ವ್ಯವಸ್ಥೆಯ ಕೊರತೆಯು ಮಳೆಯ ಸಮಯದಲ್ಲಿ ವಾಹನ ಚಾಲನೆಗೆ ಭಾರೀ ಅಡಚಣೆಯಾಗುತ್ತಿದೆ ಎಂಬುದು ಸ್ಥಳೀಯರ ವಾದ.

ಅಪಘಾತದ ಬಳಿಕ ಸ್ಥಳೀಯ ಯುವಕರಾದ ಬಣಕಲ್ ಬಾಯ್ಸ್ ತಂಡದಿಂದ ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಲಾಯಿತು. ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಮಳೆಯ ಸಮಯದಲ್ಲಿ ಎಚ್ಚರಿಕೆಯಿಂದ ಹಾಗೂ ನಿಧಾನವಾಗಿ ವಾಹನ ಚಲಾಯಿಸುವಂತೆ ಸ್ಥಳೀಯ ಆಡಳಿತ ಮನವಿ ಮಾಡಿವೆ.

RELATED ARTICLES

Latest News