ಬೆಂಗಳೂರು,ಡಿ.31– ಹೊಸ ವರ್ಷಾಚರಣೆಗಾಗಿ ಡ್ರಗ್ ಸರಬರಾಜು ಮಾಡಲು ಶೇಖರಿಸಿಟ್ಟುಕೊಂಡಿದ್ದ ಟ್ಯಾಟೂ ಆರ್ಟಿಸ್ಟ್ನನ್ನು ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿ 2.50 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಮೂಲದವನಾದ ಡ್ರಗ್ ಪೆಡ್ಲರ್ ನಗರದಲ್ಲಿ ವಾಸ ವಾಗಿದ್ದುಕೊಂಡು ಟ್ಯಾಟೂ ಹಾಕುವ ಹವ್ಯಾಸ ಹೊಂದಿದ್ದು, ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದನು.ಆರೋಪಿ ಚೊಕ್ಕನಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ಮಾದಕವಸ್ತು ಗಾಂಜಾ ಸೇರಿದಂತೆ ಪ್ರಮುಖವಾಗಿ ಹೈಡ್ರೋ ಗಾಂಜಾವನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಅಪಾರ್ಟ್ಮೆಂಟ್ನ ಆತನ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ.
ಮನೆಯನ್ನು ಶೋಧಿಸಿ 3 ಕೆಜಿ ಹೈಡ್ರೊ ಗಾಂಜಾ, 16 ಕೆಜಿ ಗಾಂಜಾ, 40 ಎಲ್ಎಸ್ಡಿ ಸ್ಟ್ರಿಪ್‌್ಸ, 130 ಗ್ರಾಂ ಚರಸ್, 2.3 ಗ್ರಾಂ ಎಂಡಿಎಂಎ ಕ್ರಿಸ್ಟಲ್, 3 ತೂಕದ ಯಂತ್ರ, 2 ಮೊಬೈಲ್ ಹಾಗೂ 1.30 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಡ್ರಗ್ಪೆಡ್ಲರ್ ಹೊರರಾಜ್ಯ ಹಾಗೂ ಹೊರದೇಶದಿಂದ ಮಾದಕವಸ್ತುಗಳನ್ನು ಸಾಗಣೆ ಮಾಡಿಕೊಂಡು ಬಂದು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾರಾಟ ಮಾಡುವ ಸಲುವಾಗಿ ಮನೆಯಲ್ಲಿ ಶೇಖರಿಸಿಟ್ಟುಕೊಂಡಿದ್ದುದು ಗೊತ್ತಾಗಿದೆ.ಈತ ಮನೆಮನೆಗೆ ಹೋಗಿ ಟ್ಯಾಟೂ ಹಾಕುತ್ತಿದ್ದನು. ಆ ವೇಳೆ ಅವರನ್ನು ಪರಿಚಯಿಸಿಕೊಂಡು ಆಗಾಗ್ಗೆ ಸಂಪರ್ಕಿಸಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.
ಈ ಡ್ರಗ್ ಪೆಡ್ಲರ್ ಮತ್ತೊಬ್ಬ ಸಹಚರನ ಜೊತೆ ಸೇರಿಕೊಂಡು ಹೊರರಾಜ್ಯಗಳಾದ ಗೋವಾದಿಂದ ಎಲ್ಎಸ್ಡಿ ಸ್ಟ್ರಿಪ್ಸ್ , ಥಾಯ್ಲ್ಯಾಂಡ್ನಿಂದ ಹೈಡ್ರೊ ಗಾಂಜಾ, ಹಿಮಾಚಲ ಪ್ರದೇಶದಿಂದ ಚರಸ್ ಹಾಗೂ ತೆಲಂಗಾಣದಿಂದ ಗಾಂಜಾವನ್ನು ಖರೀದಿಸಿಕೊಂಡು ಬಂದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಆರೋಪಿಯ ಸಹಚರ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.