Home ಇದೀಗ ಬಂದ ಸುದ್ದಿ ಭಕ್ತರ ಮನೆಗಳಿಗೆ ತಲುಪಿಸುವ ಇ-ಪ್ರಸಾದ ಸೇವೆ

ಭಕ್ತರ ಮನೆಗಳಿಗೆ ತಲುಪಿಸುವ ಇ-ಪ್ರಸಾದ ಸೇವೆ

0
ಭಕ್ತರ ಮನೆಗಳಿಗೆ ತಲುಪಿಸುವ ಇ-ಪ್ರಸಾದ ಸೇವೆ

ಬೆಂಗಳೂರು,ಮಾ.28– ರಾಜ್ಯದ ಪ್ರಮುಖ 14 ದೇವಸ್ಥಾನಗಳ ಪ್ರಸಾದವನ್ನು ಭಕ್ತರ ಮನೆಗಳಿಗೆ ತಲುಪಿಸುವ ಇ-ಪ್ರಸಾದ ಸೇವೆಗೆ ಧಾರ್ಮಿಕ ದತ್ತಿ ಇಲಾಖೆ ಚಾಲನೆ ನೀಡಿದೆ.ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸೇವೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಕೆಲ ಸಂದರ್ಭದಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇ-ಪ್ರಸಾದ ಸೇವೆ ಮೂಲಕ ಆರ್ಡರ್‌ ಮಾಡಿ ಮನೆಗೆ ಪ್ರಸಾದ ತರಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ನೋ ಲಾಸ್‌‍, ನೋ ಪ್ರಾಫಿಟ್‌ನಡಿ ಭಕ್ತರಿಗೆ ಸೇವೆ ನೀಡಲಾಗುವುದು. 100ರಿಂದ 200 ರೂ.ಗಳಲ್ಲಿ ಮನೆ ಬಾಗಿಲಿಗೆ ಪ್ರಸಾದ ಸೇವೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಶ್ರೀವಿನಾಯಕಸ್ವಾಮಿ ದೇವಾಲಯ, ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ, ಮಂಡ್ಯದ ಮೇಲುಕೋಟೆಯ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯ, ಮೈಸೂರು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ, ಕೋಲಾರದ ಮಾಲೂರಿನ ಶ್ರೀ ಪುಸನ್ನ ವೆಂಕಟರಮಣ ಸ್ವಾಮಿ ದೇವಾಲಯ, ದಕ್ಷಿಣ ಕನ್ನಡದ ಕುಕ್ಕೆ ಶ್ರೀ ಸುಬ್ರಹಣ್ಯ ದೇವಸ್ಥಾನ, ವಿಜಯನಗರದ ಹೂವಿನಹಡಗಲಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಕೊಪ್ಪಳದ ಹುಲಿಗಿಯ ಶ್ರೀ ಹುಲಿಗೆಮ ದೇವಾಲಯ ಕಲಬುರಗಿಯ ಗಾಣಗಾಪುರದ ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯ ಹಾಗೂ ಉಡುಪಿಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ, ಬೀದರ್‌ನ ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ, ಬೆಳಗಾವಿ ಯಲ್ಲಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ ದೇವಸ್ಥಾನ, ಬಳ್ಳಾರಿಯ ಶ್ರೀ ಕನಕ ದುರ್ಗಮ ದೇವಸ್ಥಾನಗಳ ಪ್ರಸಾದವು ಮನೆ ಬಾಗಿಲಿಗೆ ತಲುಪಲಿವೆ.

ಪ್ರಸಾದದಲ್ಲಿ ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ ಅಥವಾ ಭಂಡಾರ, ಕುಂಕಮ, ಬಿಲ್ವಪತ್ರೆ/ಹೂವು/ತುಳಸಿ ಹಾಗೂ ದೇವರ ಚಿತ್ರವಿರುವ ಪ್ಯಾಕೆಟ್‌ ಅಳತೆಯ ಲ್ಯಾಮಿನೇಟೆಡ್‌ ಭಾವಚಿತ್ರ, ಡಾಲರ್‌ ಮತ್ತು ದಾರ, ದೇವಾಲಯದ ಮಹಿಮೆ ಹಾಗೂ ಸ್ತೋತ್ರ ಮುದ್ರಣಗಳನ್ನು ಭಕ್ತರು ಇ-ಪ್ರಸಾದ ಸೇವೆಯಿಂದ ಪಡೆದುಕೊಳ್ಳಬಹುದಾಗಿದೆ.