ಬೆಂಗಳೂರು,ಅ.29- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು, ಬಿಲ್ಡರ್ಸ್, ಮಧ್ಯವರ್ತಿಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 20 ಮಂದಿಯ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಮೈಸೂರಿನಲ್ಲಿ ನಿರಂತರವಾಗಿ ದಾಳಿ ಹಾಗೂ ದಾಖಲೆಗಳನ್ನು ಪರಿಶೀಲಿಸುತ್ತಿರುವ ಇಡಿ ಅಧಿಕಾರಿಗಳಿಗೆ ಕೆಲವು ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ದಾಳಿಗೆ ದೀಪಾವಳಿಗೂ ಮುನ್ನವೇ ಇಲ್ಲವೇ ನಂತರ ಹಲವರಿಗೆ ದಾಳಿಯ ಬಿಸಿ ತಟ್ಟಲಿದೆ.
ಮೈಸೂರಿನ ಹಲವು ಬಿಲ್ಡರ್‌ರಸಗಳು, ಮಧ್ಯವರ್ತಿಗಳು, ರಾಜಕಾರಣಿಗಳ ಆಪ್ತರು ಸೇರಿದಂತೆ ಮತ್ತಿತರರು ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದಿರುವುದು, ಮತ್ತೆ ದೊಡ್ಡ ಮೊಟ್ಟದ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ.
ದಾಳಿಯ ಸಂದರ್ಭದಲ್ಲಿ ಇ.ಡಿ ಕೆಲವು ದಾಖಲೆಗಳು, ಹಣದ ವಹಿವಾಟು ನಡೆಸಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಹಲವು ಬಿಲ್ಡರ್‌ರಸ ಕಚೇರಿಗಳು ಮನೆಗಳ ಮೇಲೆ ಯಾವುದೇ ಸಂದರ್ಭದಲ್ಲೂ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹಿಂದೆ ಮುಡಾ ಕಚೇರಿ ಹಾಗೂ ಸೋಮವಾರ ಮತ್ತು ಮಂಗಳವಾರ ನಡೆದ ದಾಳಿಯ ವೇಳೆ ಕೆಲವರು ತಮ ಪ್ರಭಾವ ಬಳಸಿಕೊಂಡು ಕೋಟ್ಯಂತರ ರೂ. ಬೆಲೆ ಬಾಳುವ ಮುಡಾ ನಿವೇಶನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆದು ವಾಣಿಜ್ಯ ವಹಿವಾಟು ನಡೆಸಲು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಹಿಂದಿನ ಜಿಲ್ಲಾಧಿಕಾರಿ ರಾಜೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಬರೆದಿದ್ದ ಪತ್ರದ ಆಧಾರದ ಮೇಲೆ ಇ.ಡಿ ಹಗರಣದ ಜಾಡು ಹಿಡಿದಿದ್ದು, ಮುಡಾ ಆಯುಕ್ತರು, ಅಧ್ಯಕ್ಷರು, ಫಲಾನುಭವಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಸೋಮವಾರ ಬೆಳಗ್ಗೆಯಿಂದಲೇ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯೇ ಮೈಸೂರಿನ ನ್ಯೂಕಾನ್ ರಾಜ್ ಅರಸ್ ರಸ್ತೆಯಲ್ಲಿರುವ ಬಿಲ್ಡರ್ ಜಯರಾಮ್ ಅವರ ಕಚೇರಿ ಹಾಗೂ ಶ್ರೀರಾಮಪುರದಲ್ಲಿರುವ ಮನೆ ಮೇಲೆ ದಾಳಿಯನ್ನು ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ ಪಾಪಣ್ಣ ಅವರ ಮೇಲೂ ಇ.ಡಿ ದಾಳಿ ನಡೆಸಿದೆ.
ಸೋಮವಾರ ರಾತ್ರಿ 11 ಗಂಟೆಯಿಂದ ಮಂಗಳವಾರ ಬೆಳಗಿನ ಜಾವ 3 ಗಂಟೆವರೆಗೆ ದಾಖಲೆಗಳನ್ನ ಪರಿಶೀಲನೆ ನಡೆಸಿ ಮತ್ತೆ ಇಂದು ಬೆಳಗ್ಗೆ ಅವರ ಕಚೇರಿಯಲ್ಲಿ ಶೋಧ ಮುಂದುವರೆಸಿದ್ದಾರೆ. ಮುಡಾ 50:50 ಅನುಪಾತದ ಹಗರಣದಲ್ಲಿ ಬದಲಿ ನಿವೇಶನ ಪಡೆಯುವ ಸಂಬಂಧ ನಡೆದಿರುವ ಹಣಕಾಸು ವ್ಯವಹಾರದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.
ಆರೋಪವೇನು? :
ಮುಡಾದ 50:50 ಅನುಪಾತದಲ್ಲಿ 98 ಸಾವಿರ ಚದರ ಅಡಿ ಜಾಗವನ್ನ ಒಂದೇ ಬಾರಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ರಾಕೇಶ್ ಪಾಪಣ್ಣ ವಿರುದ್ಧ ಶಾಸಕ ಶ್ರೀವತ್ಸ ಆರೋಪ ಮಾಡಿ, ದಾಖಲಾತಿ ಬಿಡುಗಡೆ ಮಾಡಿದ್ದರು. ಇದರ ಜತೆಗೆ ದೂರುದಾರ ಸ್ನೇಹಮಯಿ ಕೃಷ್ಣ ಈ ಸಂಬಂಧ ದಾಖಲಾತಿಗಳನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಿ, ತನಿಖೆ ನಡೆಸುವಂತೆ ಮನವಿ ಮಾಡಿದ್ದರು.