ಬೆಂಗಳೂರು, ಅ.18- ಮುಡಾ ಅಕ್ರಮ ನಿವೇಶನ ಹಂಚಿಕೆ ಸಂಬಂಧ ದಾಖಲೆಗಳನ್ನು ನೀಡುವಂತೆ ಮೂರು ಬಾರಿ ನೋಟಿಸ್ ನೀಡಿದರೂ ಯಾವುದೇ ಉತ್ತರ ಬಾರದ ಕಾರಣ ಜಾರಿನಿರ್ದೇಶನಾಲಯ ದಾಳಿ ನಡೆಸಿದೆ ಎಂದು ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಮರ್ಥನೆ ನೀಡಿದ್ದಾರೆ.
ಪ್ರಕರಣ ಸಂಬಂಧ ಸೂಕ್ತ ದಾಖಲೆಗಳನ್ನು ನೀಡಬೇಕೆಂದು ಮುಡಾ ಅಧಿಕಾರಿಗಳಿಗೆ 3ರಿಂದ 4 ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಉತ್ತರ ಬಂದಿರಲಿಲ್ಲ. ಅನಿವಾರ್ಯವಾಗಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ಮುಡಾ ಕಚೇರಿ, ತಾಲ್ಲೂಕು ಕಚೇರಿ, ದೇವರಾಜು ಮನೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರ್ಕಾರಕ್ಕೆ ಇದರಲ್ಲಿ ಸತ್ಯ ಹೊರಗೆ ಬರುವುದು ಇಷ್ಟವಿಲ್ಲ. ದಾಖಲೆಗಳನ್ನು ಕೊಡದಿದ್ದಾಗ ದಾಳಿ ನಡೆಸುವುದು ಅನಿವಾರ್ಯ ಎಂದು ಹೇಳಿದರು.
ಈಗಾಗಲೇ ಅಲ್ಲಿನ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ, ನಿವೇಶನ ವಾಪಸ್ ಮಾಡಲಾಗಿದೆ. ಈ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಸಂಚು ಮಾಡಿದೆ. ಇತ್ತ ಲೋಕಾಯುಕ್ತ ತನಿಖೆ ಆರಂಭವಾದರೂ, ಅವರ ತನಿಖೆ ಮೇಲೆ ನಮಗೆ ಅನುಮಾನ ಇದೆ. ಲೋಕಾಯುಕ್ತದವರು ಯಾರನ್ನೂ ಕರೆದು ವಿಚಾರಣೆ ಮಾಡೇ ಇಲ್ಲ. ಈ ಪ್ರಕರಣ ಸಿಬಿಐಗೆ ಕೊಡಲಿ ಎಂದರು.
ಮುಡಾ ಪ್ರಕರಣ ಮುಚ್ಚಿ ಹಾಕುವಲ್ಲಿ ಲೋಕಾಯುಕ್ತ ಪೊಲೀಸರೂ ಶಾಮೀಲಾಗಿದ್ದಾರೆ. ಇಡಿ ದಾಳಿಯಾಗಿದೆ, ಈ ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಇಡಿ ತನಿಖೆಗೆ ಬೈರತಿ ಸುರೇಶ್ ತಂದ ಫೈಲುಗಳನ್ನು ಒಪ್ಪಿಸಬೇಕು, ತನಿಖೆಯಾಗಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ, ಬೈರತಿ ಸುರೇಶ್ ರಾಜೀನಾಮೆ ಕೊಡಬೇಕು. ಇಲ್ಲದೇ ಹೋದರೆ ಇಡಿಯವರು ಸಿಎಂ ಅವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.