Thursday, November 21, 2024
Homeರಾಜ್ಯಮೈಸೂರಿನ ಮುಡಾ ಕಚೇರಿ ಹಾಗೂ ಹಗರಣದ ಆರೋಪಿ ದೇವರಾಜು ಮನೆ ಮೇಲೆ ಇಡಿ ದಾಳಿ

ಮೈಸೂರಿನ ಮುಡಾ ಕಚೇರಿ ಹಾಗೂ ಹಗರಣದ ಆರೋಪಿ ದೇವರಾಜು ಮನೆ ಮೇಲೆ ಇಡಿ ದಾಳಿ

ED Raid on Mysore Muda office and scam accused Devaraj's house

ಬೆಂಗಳೂರು,ಆ.18– ಮೈಸೂರು ನಗರಾಭಿವೃದ್ಧಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಜಾರಿ ನಿರ್ದೇಶನಾಲಯ ಇಂದು ಎರಡು ಕಡೆ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸಿದ್ದು, ಸಂಬಂಧಪಟ್ಟವರ ವಿಚಾರಣೆ ಆರಂಭಿಸಿದೆ.
ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯದ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಇಂದು ಮೈಸೂರಿನ ಮುಡಾ ಕಚೇರಿ ಹಾಗೂ ಕೆಂಗೇರಿಯಲ್ಲಿರುವ ಜಮೀನಿನ ಮಾಲೀಕ 4ನೇ ಆರೋಪಿ ದೇವರಾಜು ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟಂಬಕ್ಕೆ ಮುಡಾದಿಂದ ಬದಲಿ ನಿವೇಶನ ನೀಡಿರುವ ಪ್ರಕರಣ ಸುನಾಮಿಯನ್ನೇ ಎದುರಿಸಿತ್ತು. ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಹಾಂ ಹಾಗೂ ಜೆಡಿಎಸ್‌‍ ಮುಖಂಡ ಪ್ರದೀಪ್‌ಕುಮಾರ್‌ ಹಗರಣದ ತನಿಖೆ ನಡೆಸಬೇಕೆಂದು ಲೋಕಾಯುಕ್ತ ಮತ್ತು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು.

ಕಾನೂನು ತೊಡಕು ನಿವಾರಿಸುವ ಸಲುವಾಗಿ ರಾಜ್ಯಪಾಲರಿಂದ ಸೂಕ್ತ ಪೂರ್ವಾನುಮತಿ ಪಡೆದು ಪ್ರಕರಣ ಮುಂದುವರೆಸಲಾಗಿದೆ. ಹೈಕೋರ್ಟ್‌ ಮತ್ತು ಕೆಳಹಂತದ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮೈಸೂರು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದರು.

ಈವರೆಗೂ 3ನೇ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ 4ನೇ ಆರೋಪಿಯಾಗಿರುವ ಜಮೀನು ಮಾಲೀಕ ದೇವರಾಜು ಅವರ ವಿಚಾರಣೆ ಮಾತ್ರ ನಡೆದಿದೆ. ಮೊದಲನೆ ಹಾಗೂ 2ನೇ ಆರೋಪಿಗಳಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಅವರ ಹೇಳಿಕೆಗಳು ದಾಖಲಾಗಿಲ್ಲ.

ಈ ನಡುವೆ ದೂರುದಾರರಾದ ಸ್ನೇಹಮಯಿ ಕೃಷ್ಣ, ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಅಥವಾ ಇಡಿಯಿಂದ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಜಾರಿ ನಿರ್ದೇಶನಾಲಯಕ್ಕೆ ಖುದ್ದು ದೂರು ನೀಡಿ ದಾಖಲೆಗಳನ್ನು ಸಲ್ಲಿಸಿರುವುದಲ್ಲದೆ ಹೇಳಿಕೆಯನ್ನು ನೀಡಿದರು.

ಅದರ ಆಧಾರದ ಮೇಲೆ ಈವರೆಗೂ ಕಾನೂನಾತಕ ಪರಿಶೀಲನೆಗಳನ್ನು ನಡೆಸಿದ್ದ ಜಾರಿ ನಿರ್ದೇಶನಾಲಯ ಇಂದು ಅಖಾಡಕ್ಕಿಳಿದಿದೆ. ಕೇಂದ್ರ ಭದ್ರತಾ ಪಡೆಗಳ ಸಶಸ್ತ್ರ ಕಾವಲಿನೊಂದಿಗೆ ಶೋಧ ಕಾರ್ಯಚರಣೆ ನಡೆಸಲಾಗಿದೆ. ಮುಡಾದ ಕಾರ್ಯದರ್ಶಿ ಪ್ರಸನ್ನಕುಮಾರ್‌ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಡಾ ಕಚೇರಿಗೆ ಬಂದು ಮಾಹಿತಿ ಕೇಳಿದ್ದಾರೆ. ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. ಇನ್ನೆರಡು ದಿನ ಶೋಧ ಕಾರ್ಯ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಜಾರಿ ನಿರ್ದೇಶನಾಲಯದ ದಾಳಿ ಬೆನ್ನಲ್ಲೇ ರಾಜಕೀಯ ಕೆಸರೆರಚಾಟಗಳು ಆರಂಭಗೊಂಡಿವೆ. ಕೇಂದ್ರ ಸಂಸ್ಥೆಯ ತನಿಖೆ ಚುರುಕುಗೊಂಡಿದ್ದೇ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬ ಚರ್ಚೆಗಳಿವೆ.

ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿ ಬಿ.ನಾಗೇಂದ್ರ ಅವರನ್ನು ಬಂಧಿಸಿತ್ತು. ಇದರಿಂದಾಗಿ ಅವರು ತಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇತ್ತೀಚೆಗಷ್ಟೇ ಜಾಮೀನು ಪಡೆದು ಅವರು ಬಿಡುಗಡೆಯಾಗಿದ್ದಾರೆ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮುಡಾ ಹಗರಣದ ಆರೋಪ ಗಂಭೀರ ಸ್ವರೂಪದ್ದಾಗಿದೆ. ಜಾರಿನಿರ್ದೇಶನಾಲಯದ ತನಿಖೆ ಆರಂಭವಾಗುತ್ತಿರುವುದು ಕಾಂಗ್ರೆಸ್‌‍ನಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಹುಟ್ಟು ಹಾಕಿದೆ. ಕೆಲವರಿಗೆ ಒಳಗೊಳಗೆ ಖುಷಿ ಇದ್ದರೆ, ಸಿದ್ದರಾಮಯ್ಯ ಅವರ ಬೆಂಬಲಿಗರು ಆತಂಕ ದುಗುಡದಿಂದ ಬಳಲುವಂತಾಗಿದೆ.

RELATED ARTICLES

Latest News