ರಾಂಚಿ, ನ.12- ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ಒಳನುಸುಳುವಿಕೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ,ಜಾರ್ಖಂಡ್‌ನ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಇಂದು ದಾಳಿ ನಡೆಸಿದೆ.
ಒಟ್ಟು ಸುಮಾರು 17 ಸ್ಥಳಗಳಲ್ಲಿ ಕಾರ್ಯಾಚರನೆ ನಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಕೆಲವು ಬಾಂಗ್ಲಾದೇಶಿ ಮಹಿಳೆಯರನ್ನು ಜಾರ್ಖಂಡ್‌ಗೆ ಒಳನುಸುಳುವಿಕೆ ಮತ್ತು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಇಡಿ ಪ್ರಕರಣ ದಾಖಲಿಸಿದೆ.
ಇತ್ತೀಚಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಂತಾಲ್ ಪರಗಣ ಮತ್ತು ಕೊಲ್ಹಾನ್ ಪ್ರದೇಶಗಳ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳ ಜನಸಂಖ್ಯಾ ಭೂದೃಶ್ಯವನ್ನು ಬದಲಾಯಿಸಲು ರಾಜ್ಯ ಸರ್ಕಾರವು ಇಂತಹ ಒಳನುಸುಳುವಿಕೆಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಆರೋಪಿಸಿದ್ದರು.
ಆಡಳಿತಾರೂಢ ಜೆಎಂಎಂ ನೇತೃತ್ವದ ಸರ್ಕಾರ ಜಾರ್ಖಂಡ್ ಅನ್ನು ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿ ನುಸುಳುಕೋರರ ಧರ್ಮಶಾಲೆಯನ್ನಾಗಿ ಪರಿವರ್ತಿಸುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದರು.ಇದರ ಜೊತೆಗೆ ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಿಂದ ನುಸುಳುಕೋರರನ್ನು ಗುರುತಿಸಲು ಮತ್ತು ಗಡಿಪಾರು ಮಾಡಲು ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದರು.
ನಾಳೆ ಮೊದಲ ಹಂತದ ವಿಧಾನಸಭೆ ಚುನಾವಣೆ 43 ಕ್ಷೇತ್ರಗಳಿಗೆ ನಡೆಯಲಿದ್ದು, ಎರಡನೇ ಹಂತದ 38 ಕ್ಷೇತ್ರಗಳಿಗೆ ನವೆಂಬರ್ 20ರಂದು ಮತದಾನ ನಡೆಯಲಿದೆ.ರಾಂಚಿಯ ಬರಿಯಾತು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್‌ಐಆರ್ ಅನ್ವಯ ಇಡಿ ಪಿಎಂಎಲ್‌ಎಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ನಡೆಸುತ್ತಿದೆ.
ಭಾರತ-ಬಾಂಗ್ಲಾದೇಶ ಗಡಿಯಿಂದ ಸ್ಥಳೀಯರ ಸಹಾಯದಿಂದ ದೇಶದೊಳಗೆ ನುಸುಳಿದ್ದ ಬಾಂಗ್ಲಾದೇಶದ ಮಹಿಳೆಯ ನೀಡಿದ್ದ ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಸ್ಥಳೀಯರೊಬ್ಬರನ್ನು ನಂತರ ಬಂಧಿಸಿ ಸುಮಾರು ಆರು ಮಹಿಳೆಯರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ದೂರು ನೀಡಿದ ಮಹಿಳೆ ಇದೇ ಗೆಸ್ಟ್ ಹೌಸ್ ನಿಂದ ತಪ್ಪಿಸಿಕೊಂಡು ಠಾಣೆಗೆ ಬಂದಿದ್ದಾರೆ. ಈ ಮಹಿಳೆಯರಲ್ಲಿ ಒಬ್ಬರಿಂದ ನಕಲಿ ಆಧಾರ್ ಕಾರ್ಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬ್ಯೂಟಿ ಸಲೂನ್‌ಗಳಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ವೇಶ್ಯಾವಾಟಿಕೆಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಮಹಿಳೆಯರ ಕಳ್ಳ ಸಾಗಾಣಿಕೆ ಮಾಡಲಾಗಿದೆ ಎಂದು ದೂರುದಾರ ಮಹಿಳೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಬುಡಕಟ್ಟು ಜಿಲ್ಲೆಗಳಾದ ಸಂತಾಲ್ ಪರಗಣ ಮತ್ತು ಕೊಲ್ಹಾನ್ ಸೇರಿದಂತೆ ಬಾಂಗ್ಲಾದೇಶ ಸೇರಿದಂತೆ ಪೂರ್ವ ಗಡಿಯಿಂದ ಜಾರ್ಖಂಡ್‌ಗೆ ಒಳನುಸುಳುವಿಕೆಯ ಸಂಪೂರ್ಣ ಹರವು ಕುರಿತು ಸಂಸ್ಥೆ ತನಿಖೆ ನಡೆಸಲಿದೆ ಎಂದು ಇಡಿ ಮೂಲಗಳು ಈ ಹಿಂದೆ ತಿಳಿಸಿದ್ದವು.
ಬಾಂಗ್ಲಾದೇಶಿ ವಲಸಿಗರ ಒಳಹರಿವಿನ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ಸಮಿತಿಯನ್ನು ಸ್ಥಾಪಿಸಲು ಹೈಕೋರ್ಟ್ ಆದೇಶದ ಹೊರತಾಗಿಯೂ ಜಾರ್ಖಂಡ್ ಸರ್ಕಾರವು ಒಳನುಸುಳುವಿಕೆ ಸಮಸ್ಯೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ . ಅಕ್ರಮ ಬಾಂಗ್ಲಾ ವಲಸಿಗರು ರಾಜ್ಯದಲ್ಲಿ ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಜಾರ್ಖಂಡ್ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು.
ಈ ಅಫಿಡವಿಟ್‌ಗೆ ಪ್ರತಿಕ್ರಿಯಿಸಿದ ಜೆಎಂಎಂ ಕೇಂದ್ರ ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ಅವರು, ಜಾರ್ಖಂಡ್‌ನಲ್ಲಿ ಒಳನುಸುಳುವಿಕೆ ನಡೆದಿದ್ದರೆ, ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವಾಲಯಗಳು ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ