Tuesday, August 26, 2025
Homeರಾಜ್ಯಕಿಟಕಿಯ ಸಜ್ಜಾ ಕುಸಿದು ಗಾಯಗೊಂಡ ವಿದ್ಯಾರ್ಥಿಗಳ ಚಿಕಿತ್ಸಾ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸಲಿದೆ : ಮಧು...

ಕಿಟಕಿಯ ಸಜ್ಜಾ ಕುಸಿದು ಗಾಯಗೊಂಡ ವಿದ್ಯಾರ್ಥಿಗಳ ಚಿಕಿತ್ಸಾ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸಲಿದೆ : ಮಧು ಬಂಗಾರಪ್ಪ

Education Department to bear medical expenses of students injured in window collapse

ಬೆಂಗಳೂರು, ಆ.26- ದೇವನಹಳ್ಳಿ ಪಟ್ಟಣದ ಕೋಟೆ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕಿಟಕಿಯ ಸಜ್ಜಾ ಕುಸಿದು ಗಾಯಗೊಂಡಿದ್ದ ಮೂವರು ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌‍. ಮಧು ಬಂಗಾರಪ್ಪ ಅವರು ವೈದ್ಯಕೀಯ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸುವುದಾಗಿ ಪ್ರಕಟಿಸಿದ್ದಾರೆ.

ಗಾಯಗೊಂಡ ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿರುವ ನಗರದ ಖಾಸಗಿ ಆಸ್ಪತ್ರೆಗೆ ಇಂದು ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ನೀಡಲು ಕೋರಿದರು. ನಂತರ ಗಾಯಾಳು ವಿದ್ಯಾರ್ಥಿಯನ್ನು ಹಾಗೂ ಅವರ ಕುಟುಂಬಗಳನ್ನು ಸಂಪರ್ಕಿಸಿ ಧೈರ್ಯ ಹೇಳಿದರು.

ಗಾಯಾಳು ಮಕ್ಕಳ ಎಲ್ಲಾ ವೈದ್ಯಕೀಯ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸಲಿದೆ. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಅಧಿಕಾರಿಗಳು 24 ಗಂಟೆಗಳ ಕಾಲ ನಿಗಾವಹಿಸಬೇಕು ಎಂದು ಅವರು ಸೂಚಿಸಿದರು.

ಗಾಯಗೊಂಡ ಮೂವರು ವಿದ್ಯಾರ್ಥಿಗಳಲ್ಲಿ ಓರ್ವ ಹೊಸಟ್‌ ಆಸ್ಪತ್ರೆಗೆ ದಾಖಲಾಗಿದ್ದು, ಇನ್ನೊಬ್ಬ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ಮುನ್ನ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಓರ್ವ ವಿದ್ಯಾರ್ಥಿಯನ್ನು ಈಗಾಗಲೇ ಡಿಸ್ಚಾರ್ಜ್‌ ಮಾಡಲಾಗಿದೆ.

ಸಚಿವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಶಾಲಾ ಕಟ್ಟಡವನ್ನು ಸಂಪೂರ್ಣ ಪರಿಶೀಲಿಸಿ ವರದಿ ಸಲ್ಲಿಸಲು ಆದೇಶಿಸಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ ಸಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.ಮಕ್ಕಳ ಆರೋಗ್ಯ ಮತ್ತು ಭದ್ರತೆ ಸರ್ಕಾರದ ಪ್ರಮುಖ ಜವಾಬ್ದಾರಿ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

RELATED ARTICLES

Latest News