Monday, January 26, 2026
HomeEesanje News36ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗರ ಹೆಮ್ಮೆಯ ಧ್ವನಿ `ಈ ಸಂಜೆ' ಪತ್ರಿಕೆ

36ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗರ ಹೆಮ್ಮೆಯ ಧ್ವನಿ `ಈ ಸಂಜೆ’ ಪತ್ರಿಕೆ

ಯತೋಧರ್ಮಃ ತತೋ ಜಯಃ ಒಂದು ಸಿದ್ಧಾಂತ, ದೃಢಸಂಕಲ್ಪ, ಗುರಿ, ಧ್ಯೇಯ, ಗುರಿಯಲ್ಲಿ ಸ್ಪಷ್ಟತೆ, ಬದ್ಧತೆಗಳಿದ್ದು, ತಾನು ಮಾಡುವ ಕಾಯಕ ಜನಪರ-ಜೀವಪರ-ಸಮಾಜಮುಖಿ ಆಗಿದ್ದರೆ ಇಡೀ ಜಗತ್ತೇ ಅಂಥ ವ್ಯಕ್ತಿಯ ಬೆನ್ನಿಗೆ ನಿಲ್ಲುತ್ತದೆ. ಮಾರ್ಗಮಧ್ಯೆ ಎಂಥದೇ ಸವಾಲುಗಳು ಎದುರಾದರೂ ಅವುಗಳನ್ನು ಮೆಟ್ಟಿ ಗುರಿ ತಲುಪುವ ಶಕ್ತಿ ತನಗೆ ತಾನೇ ಅವನಲ್ಲಿ ಸ್ಫುರಿಸಿ ಸಂಚಯನವಾಗುತ್ತದೆ. ಇದು ಸತ್ಯ.


ಪ್ರಸಕ್ತ ವರ್ತಮಾನದಲ್ಲಿ ಈ ಮಾತಿಗೊಂದು ಜ್ವಲಂತನಿದರ್ಶನ ಈ ಸಂಜೆ ಕನ್ನಡ ಪತ್ರಿಕೆ. ಸುಮಾರು 34 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆರಂಭವಾಗಿ, ನಗರಕ್ಕಷ್ಟೇ ಸೀಮಿತವಾಗಿದ್ದ ಈ ಸಂಜೆ ಪತ್ರಿಕೆ ಇಂದು ಹಳೇಮೈಸೂರು, ಮುಂಬೈ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕಗಳಲ್ಲಿ, ಅಂದರೆ ಇಡೀ ಕರ್ನಾಟಕದಾದ್ಯಂತ ತನ್ನ ಕಾರ್ಯಜಾಲವನ್ನು ವಿಸ್ತರಿಸಿ ಕನ್ನಡಿಗರ ಮನೆಮಾತಾಗಿದೆ.


ಇದಿಷ್ಟೇ ಅಲ್ಲ; ಅಂತರ್ಜಾಲದ ಮೂಲಕ ದಿನನಿತ್ಯ ದೇಶ-ವಿದೇಶಗಳಲ್ಲಿರುವ ಕನ್ನಡಿಗರನ್ನೂ ತಲುಪುತ್ತಿದೆ ಈ ಸಂಜೆ ನ್ಯೂಸ್‌‍..! ಈ ಸಂಜೆ ಇಂಥದೊದು ಅದ್ವಿತೀಯ ಸಾಧನೆ ಮಾಡಿ ಕನ್ನಡಿಗರ ಜೀವನಾಡಿ ಎಂದೇ ಗುರುತಿಸಿಕೊಳ್ಳಲು ಕಾರಣ ಪತ್ರಿಕೆಯ ಸಾರಥ್ಯ ವಹಿಸಿ, ಅದನ್ನು ಮುನ್ನಡೆಸುತ್ತಿರುವವರು ಅಭಿಮಾನಿ ಸಮೂಹ ಸಂಸ್ಥೆಯ ಸ್ಥಾಪಕರು ಹಾಗೂ ಸಂಪಾದಕರು.


ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸುವ ಕನಸು ಕಂಡು ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊಸ ಸವಾಲುಗಳನ್ನು ಎದುರಿಸಬೇಕಾಯಿತು. ಕನ್ನಡಿಗರಿಗೆ ಆಗುತ್ತಿದ್ದ ಅಪಮಾನ ಹಾಗೂ ಅಸಹಕಾರವನ್ನು ಧೈರ್ಯವಾಗಿ ಎದುರಿಸಿ ಅಭಿಮಾನ ದಿನಪತ್ರಿಕೆ ಆರಂಭಗೊಂಡಿತ್ತು. 1985 ರಲ್ಲಿ ಆರಂಭಗೊಂಡ ಅಭಿಮಾನಿ ಪ್ರಕಾಶನ ಹೊರತಂದ ಅರಗಿಣಿ ಸಿನಿಮಾ ವಾರಪತ್ರಿಕೆ ಸತತವಾಗಿ 40 ವರ್ಷಗಳ ಕಾಲ ಹೊರತಂದ ಕೀರ್ತಿ ಸಲ್ಲುತ್ತದೆ.


ಅಭಿಮಾನ ಪತ್ರಿಕೆ ಮುನ್ನಡೆದಂತೆ ಹಲವಾರು ನಿಯತಕಾಲಿಕಗಳು ಓದುಗರನ್ನು ಸೆಳೆದವು. 1989 ರಲ್ಲಿ ಈ ಸಂಜೆ ಆರಂಭಗೊಂಡ ನಂತರ ಸಿಟಿ ಟುಡೆ ಆಂಗ್ಲ ಪತ್ರಿಕೆ ಕೂಡ ಆರಂಭಗೊಂಡು ಹೊಸ ಕ್ರಾಂತಿಯನ್ನೇ ಸೃಷ್ಟಿಸಿತ್ತು. 1992 ರಲ್ಲಿ ಅಧಿಕೃತವಾಗಿ ಈ ಸಂಜೆ ನೋಂದಣಿಗೊಂಡು ಇಂದು 35ನೇ ವರ್ಷಕ್ಕೆ ಅಡಿ ಇಡುತ್ತಿರುವ ಈ ಸಂದರ್ಭದಲ್ಲಿ ಈ ಪತ್ರಿಕಾಲಯದಲ್ಲಿ ಸೇವೆ ಸಲ್ಲಿಸಿದ ಹಲವರು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.


ಯತೋಧರ್ಮಸ್ತತೋ ಜಯಃ ಎಂಬುದು ಅವರ ದೃಢ ನಂಬಿಕೆ. (ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ-ಧರ್ಮಕ್ಕೆಂದೂ ನಾಶವಿಲ್ಲ. ಅದು ಸನಾತನ) ಅವರ ಸಿದ್ಧಾಂತ ಒಂದೇ ; ಹಣ ಕೊಟ್ಟು ಪತ್ರಿಕೆಯನ್ನು ಕೊಂಡು ಓದುವ ಓದುಗ ಪ್ರಭುಗಳಿಗೆ ಮೋಸ-ಅನ್ಯಾಯ ಆಗಕೂಡದು, ತಪ್ಪು ಮಾಹಿತಿ ಕೊಡಕೂಡದು, ಪತ್ರಿಕೆ ಎಂದೂ ಓದುಗರ ದಾರಿ ತಪ್ಪಿಸಕೂಡದು, ಹಾಗೆಯೇ ಯಾವುದೇ ಸುದ್ದಿಗಳನ್ನು ಅನಗತ್ಯ ವೈಭವೀಕರಿಸದೆ, ಸ್ಪಷ್ಟವಾಗಿ, ಯಥಾವತ್ತಾಗಿ ದಾಖಲಿಸಬೇಕು, ಅದೇ ವೃತ್ತಿಧರ್ಮ. ಅದನ್ನು ಕಾಪಾಡಿಕೊಳ್ಳುವುದೇ ಪತ್ರಿಕೆ ಮತ್ತು ಪತ್ರಕರ್ತನ ಹೆಗಲಮೇಲಿನ ಗುರುತರ ಜವಾಬ್ದಾರಿ.


ಪತ್ರಕರ್ತ ಎಂದೂ ನಿರ್ಭೀತನಾಗಿರಬೇಕು, ತಾನು ಸತ್ಯನಿಷ್ಠನಾಗಿದ್ದರೆ, ವಸ್ತುನಿಷ್ಠವಾಗಿ ಬರೆದರೆ ಪತ್ರಕರ್ತ ನಿರ್ಭೀತನಾಗಿ ಬದುಕಲು ಸಾಧ್ಯ ಎಂಬುದು ಅವರ ಜೀವನದೃಷ್ಟಿ. ಅವರು ತಮ ಕಚೇರಿ ಸಿಬ್ಬಂದಿಗೆ ಸದಾ ಹೇಳುವುದೂ ಇದನ್ನೇ. ಇದೇ ಪತ್ರಿಕೆಯ ಗಟ್ಟಿತನ ಮತ್ತು ಯಶಸ್ಸಿನ ಗುಟ್ಟು.


ಸಾವಿರಾರು ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು, ನೆಲೆ ಕಂಡುಕೊಳ್ಳಲು ಆಶ್ರಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಭಿಮಾನಿ ಸಮೂಹಸಂಸ್ಥೆ, ಅದಷ್ಟಕ್ಕೇ ಸೀಮಿತವಾಗಿರದೆ, ಅಭಿಮಾನಿ ಬಳಗದ ಕಚೇರಿ ನಿಜಕ್ಕೂ ಪತ್ರಿಕಾರಂಗದ ಒಂದು ವಿಶ್ವವಿದ್ಯಾನಿಲಯ ಎಂದೇ ಕರ್ನಾಟಕದ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದು ಅಚ್ಚರಿಯಾದರೂ ಸತ್ಯ. ಕಾಲೇಜುಗಳಲ್ಲಿ ಜರ್ನಲಿಸಂ ಪದವಿ ಪಡೆದ ನೂರಾರು ಜನ, ಇಲ್ಲಿ, ಈ ಸಂಜೆ ಕಚೇರಿಯಲ್ಲಿ ಸೇರಿ, ಕೆಲಸ ಕಲಿತು, ಪಳಗಿ ಇಂದು ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಪತ್ರಕರ್ತರು ಎನಿಸಿಕೊಂಡಿದ್ದಾರೆ.


ಆದ್ದರಿಂದಲೇ ಈ ಸಂಜೆ ಕಚೇರಿ ಮಾಧ್ಯಮಕ್ಷೇತ್ರದ ಪ್ರಯೋಗಶಾಲೆ ಎಂದೇ ಖ್ಯಾತಿ ಪಡೆದಿದೆ. ಜೊತೆಜೊತೆಗೇ ಬದಲಾದ ತಂತ್ರಜ್ಞಾನಗಳ ಯುಗದ ಕಾಲಮಾನಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಹೊಸ ರೂಪ ಪಡೆದು ಓದುಗರ ಅಭಿರುಚಿಗೆ ತಕ್ಕಂತೆ ಸುದ್ದಿಗಳನ್ನು ಪ್ರಸಾರ ಮಾಡುತ್ತಾ, ಸಾಮಾಜಿಕ ಹೊಣೆಯರಿತು ವೃತ್ತಿಗೌರವಕ್ಕೆ ಎಂದೂ, ಎಲ್ಲಿಯೂ ಧಕ್ಕೆಯುಂಟಾಗದಂತೆ ಯಾವುದೇ ಮುಲಾಜುಗಳಿಗೂ ಒಳಗಾಗದಂತೆ ನಿರ್ಭೀತಿಯಿಂದ ಮುನ್ನಡೆಯುತ್ತಿದೆ.


ಅಭಿಮಾನಿ ಬಳಗ ಮುಖ್ಯಸ್ಥರು ಮತ್ತು ಪತ್ರಿಕೆಯ ಸಂಪಾದಕರ ಕಾರ್ಯಕ್ಷಮತೆಯಿಂದಾಗಿ ಈ ಸಂಜೆ ಪತ್ರಿಕೆ ಸದಾ ಒಂದು ಹೆಜ್ಜೆ ಮುಂದೆಯೇ ಇರುತ್ತದೆ. ಕನ್ನಡಪರ ಹೋರಾಟದಲ್ಲಿ ಈ ಸಂಜೆ ಪತ್ರಿಕೆ ಮುಂಚೂಣಿಯಲ್ಲಿ ನಿಲ್ಲುತ್ತದೆ. ಕನ್ನಡದ ಮನಸ್ಸುಗಳ ನೋವಿಗೆ ತಕ್ಷಣವೇ ಸ್ಪಂದಿಸುತ್ತದೆ. ಕನ್ನಡಿಗರ ಹೋರಾಟಗಳಿಗೆ ಸ್ಫೂರ್ತಿ ನೀಡಿ ಹೋರಾಟಗಳನ್ನು ಸಂಘಟಿಸಿದ ಏಕೈಕ ಪತ್ರಿಕೆ ಈ ಸಂೆ.
ನೊಂದವರ ದನಿಯಾಗಿ, ಸಂತ್ರಸ್ತರ ಪರವಾಗಿ, ದೀನ-ದಲಿತರ ಬೆನ್ನಿಗೆ ನಿಲ್ಲುವುದನ್ನು ಈ ಸಂಜೆ ತನ್ನ ಆದ್ಯ ಕರ್ತವ್ಯ ಎಂದೇ ಭಾವಿಸಿ ಕಾರ್ಯ ನಿರ್ವಹಿಸುತ್ತದೆ. 34 ವಸಂತಗಳ ಸುದೀರ್ಘ ಕಾಲವನ್ನು ಸಾರ್ಥಕವಾಗಿ ಪೂರೈಸಿ 35ನೇ ವಸಂತಕ್ಕೆ ಪದಾರ್ಪಣೆ ಮಾಡುತ್ತಿದೆ ಇಂದು ಪತ್ರಿಕೆ. ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದೆ. ಇದ್ಯಾವುದಕ್ಕೂ ಜಗ್ಗದೆ, ಬಗ್ಗದೆ, ಕುಗ್ಗದೆ ಮುನ್ನಡೆದಿದೆ.


ದೃಶ್ಯ ಮಾಧ್ಯಮಗಳು, ವೆಬ್‌ಸೈಟ್‌‍ ಚಾನೆಲ್‌ಗಳ ಅಬ್ಬರದ ಮಧ್ಯೆ ಮುದ್ರಣ ಮಾಧ್ಯಮ ಕಳೆದುಹೋಗಿ ಬಿಡುತ್ತದೆಯೇನೋ ಎಂಬ ಅನುಮಾನ-ಆತಂಕಗಳ ನಡುವೆಯೂ ಈ ಸಂಜೆ ತನ್ನ ತಾಜಾತನವನ್ನು ಕಾಪಾಡಿಕೊಂಡು ಬಂದಿದೆ. ಈ ಸಂೆಯ ಸಾರಥ್ಯ ವಹಿಸಿರುವ ಛಲಗಾರ, ಸ್ವಾಭಿಮಾನಿ ಕನ್ನಡಿಗರಾದ ಟಿ.ವೆಂಕಟೇಶ್‌ ಅವರು ಸುದ್ದಿ ಪ್ರಸಾರದಲ್ಲಾಗಲಿ, ಗುಣಮಟ್ಟದಲ್ಲಾಗಲಿ ರಾಜಿ ಮಾಡಿಕೊಳ್ಳದ ಧೀಮಂತ ವ್ಯಕ್ತಿತ್ವದವರು.


ಒಂದು ಪತ್ರಿಕೆ ಎಂದಿಗೂ ನ್ಯಾಯದ ಪರ, ಸಂಕಷ್ಟದಲ್ಲಿರುವವರ ಪರ ನಿಲ್ಲಬೇಕೇ ಹೊರತು ಗೆದ್ದೆತ್ತಿನ ಬಾಲ ಹಿಡಿಯುವುದು ಪತ್ರಿಕಾವೃತ್ತಿಗೆ ಮಾಡುವ ದ್ರೋಹ ಎಂಬುದು ಅವರ ದೃಢ ನಿಲುವು. ಪತ್ರಿಕೆಯನ್ನು ಬೆಳೆಸುವ ಮೂಲಕ ಜನರ ನೋವಿಗೆ ದನಿಯಾಗಿ ಎಂಬುದು ಅವರ ನಿತ್ಯದ ಪಾಠ. ಅದೇ ರೀತಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ, ಓದುಗರಿಗೆ ಸ್ಪಂದಿಸುತ್ತಾ ಮುನ್ನಡೆದಿರುವ ಈ ಸಂಜೆ ಸಿಬ್ಬಂದಿಯ ಶ್ರಮ ಇಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಡಿಜಿಟಲ್‌ ಮಾಧ್ಯಮದಲ್ಲೂ ಈ ಸಂಜೆ ಮುಂಚೂಣಿಯಲ್ಲಿದೆ.


ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಗರ ಹಾವಳಿಯಿಂದ ಕನ್ನಡಕ್ಕೆ ಧಕ್ಕೆಯುಂಟಾಗುವಂತಹ ಸಮಯಗಳಲ್ಲೆಲ್ಲ ಈ ಸಂಜೆ ಕೆರಳಿ ನಿಂತು ಮಹಾಶಕ್ತಿಯಾಗಿ ವಿಜೃಂಭಿಸಿದೆ. ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದ್ದ ಸಂದರ್ಭಗಳಲ್ಲಿ ಕೂಡ ಸಮಗ್ರ ಕರ್ನಾಟಕದ ಕನಸನ್ನು ಹೊತ್ತು, ಗಡಿಭಾಗದ ಜಿಲ್ಲೆಗಳಾದ ಹುಬ್ಬಳ್ಳಿ, ಬೆಳಗಾವಿ ಮುಂತಾದೆಡೆಗಳಲ್ಲೂ ತನ್ನ ಆವೃತ್ತಿಗಳನ್ನು ಆರಂಭಿಸಿ ಅಲ್ಲಿನ ಸಮಸ್ಯೆಗಳಿಗೆ ಧ್ವನಿಯಾಗಿದೆ. ಅದು ನೋಟು ನಿಷೇಧವಿರಲಿ, ಕೊರೋನಾ ರುದ್ರತಾಂಡವವಿರಲಿ, ಭೂಕುಸಿತ, ಅತಿವೃಷ್ಟಿ-ಅನಾವೃಷ್ಟಿಗಳ ಹಾವಳಿಯಿರಲಿ ಜನ ಅತಂತ್ರರಾಗಿ, ಸಂತ್ರಸ್ತರಾಗಿ ಕಂಗಾಲಾದ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಜನರ ಪರವಾಗಿ ನಿಂತು ಶ್ರೀಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತ ಜನಮಾನಸದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿದೆ ಈ ಸಂಜೆ.


ಓದುಗರ ನಂಬಿಕೆ, ಕನ್ನಡಿಗರ ಪ್ರೀತಿ, ಜಾಹೀರಾತುದಾರರ ಔದಾರ್ಯಗಳೇ ಅಂದು ಇಂದು ಎಂದೆಂದೂ ಜೀವಾಳ, ಶಕ್ತಿ ಈ ಸಂಜೆಗೆ. ಸತ್ಯಮಾರ್ಗದಲ್ಲಿ ಸೂಕ್ಷ್ಮಗ್ರಾಹಿಯಾಗಿ ಎಚ್ಚರಿಕೆಯ ಹೆಜ್ಜೆಯಿಡುತ್ತಾ, ಕನ್ನಡಿಗರ ಅಭಿಮಾನ, ಪ್ರೀತ್ಯಾದರಗಳಿಗೆ ಪಾತ್ರರಾಗಿ, ಅವಿರತವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಜೆ ಸಂಪಾದಕರ ಕಾರ್ಯದಕ್ಷತೆ, ಕಾರ್ಯಕ್ಷಮತೆಗಳ ವ್ಯಕ್ತಿತ್ವ ಕೇವಲ ಅವರ ಪತ್ರಿಕಾಬಳಗಕ್ಕೆ ಮಾತ್ರವಲ್ಲದೆ, ಪತ್ರಿಕೋದ್ಯಮದ ಪ್ರತಿಯೊಬ್ಬನಿಗೂ ಸ್ಫೂರ್ತಿದಾಯಕ, ಮಾದರಿ ಮತ್ತು ಆದರ್ಶ ಎಂದು ಹೇಳಿದರೆ ಅದರಲ್ಲಿ ಉತೆ್ಪ್ರೕಕ್ಷೆಯೇನೂ ಇರಲಿಕ್ಕಿಲ್ಲ.


ಸಾಮಾಜಿಕ ಮಾಧ್ಯಮದಲ್ಲೂ ಕ್ರಾಂತಿ
ಪ್ರಸ್ತುತ ಈ ಸಂಜೆಯ ಸುದ್ದಿ ಕಣಜ, eesanje.com ಯೂ ಟ್ಯೂಬ್‌, ಈ ಸಂಜೆ ನ್ಯೂಸ್‌‍, ಫೇಸ್‌‍ಬುಕ್‌, ಇನ್ಸ್ಟಾಗ್ರಾಮ್‌ ಮತ್ತು ಟ್ವಿಟ್ಟರ್‌ಗಳಲ್ಲಿ ದೂರದ ಸಪ್ತಸಾಗರದಾಚೆ ಕರುನಾಡಿನ ಸಮಗ್ರ ಸುದ್ದಿಯನ್ನು ಅಲ್ಲಿನ ಕನ್ನಡಿಗರಿಗೆ ನೀಡುತ್ತಿದೆ ಎಂಬುದು ದೊಡ್ಡ ಹೆಗ್ಗಳಿಕೆ.
ಅಮೆರಿಕ, ಯೂರೋಪ್‌, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಕೆನಡಾ ಸೇರಿದಂತೆ ಹಲವಾರು ದೇಶಗಳಲ್ಲಿ ಭಾರತೀಯರು ಅದರಲ್ಲೂ ಕನ್ನಡಿಗರು eesanje.com ನ ಓದುಗರಾಗಿದ್ದಾರೆ.


ಕಳೆದ 2004 ರಲ್ಲಿಯೇ ನ್ಯೂಸ್‌‍ ವೆಬ್‌ ಪೋರ್ಟಲ್‌ ಅನ್ನು ಆರಂಭಿಸಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಈ ಸಂಜೆಯ ಒಂದು ಹೊಸ ಮೈಲಿಗಲ್ಲು. ಅಂದಿನಿಂದ ಹೊಸ ಆವಿಷ್ಕಾರಗಳಿಗೆ ಒಗ್ಗಿಕೊಂಡು ಈಗ ಲಕ್ಷಾಂತರ ಓದುಗರನ್ನು ತನ್ನತ್ತ ಸೆಳೆದಿದೆ.
ಪ್ರಸ್ತುತ ಯೂ ಟ್ಯೂಬ್‌ನಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಓದುಗರಿದ್ದು, ಇದರಲ್ಲಿ ಪ್ರತಿದಿನ ಸುದ್ದಿಗಳ ಜೊತೆಗೆ ಸ್ಯಾಂಡಲ್‌ವುಡ್‌ನ ಮಾಹಿತಿಗಳು, ಅಧ್ಯಾತ ಸೇರಿದಂತೆ ಪ್ರಸಕ್ತ ಪ್ರಚಲಿತ ವಿದ್ಯಮಾನಗಳ ಸಂವಾದ ಮೆಚ್ಚುಗೆ ಪಡೆದಿದೆ.

ಈ ಸಂಜೆ ನ್ಯೂಸ್‌‍ ಪೋರ್ಟಲ್‌ ಈಗ ದೇಶೀಯ ಮಟ್ಟದಲ್ಲೂ ಸ್ಥಾನ ಪಡೆದಿದೆ. ರಾಜ್ಯದಲ್ಲೂ ತನ್ನ ಹೊಸ ಛಾಪು ಮೂಡಿಸಿದೆ. ಕೊರೊನಾ ಸಂದರ್ಭದಲ್ಲಿ ನಿಗದಿತವಾಗಿ ಸುದ್ದಿಯನ್ನು ಬಿತ್ತರಿಸಿ ಜಾಗೃತಿ ಮೂಡಿಸಿದ ಹಿನ್ನಲೆಯಲ್ಲಿ ಗೂಗಲ್‌ ವತಿಯಿಂದ ಪ್ರಶಂಸಾ ಪತ್ರ ಕೂಡ ಈ ಸಂಜೆ ಬಳಗಕ್ಕೆ ಸಂದಿದೆ.

ಫೇಸ್‌‍ಬುಕ್‌ನಲ್ಲೂ 2 ಲಕ್ಷಕ್ಕೂ ಹೆಚ್ಚು ಓದುಗರು, ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌ಗಳಲ್ಲಿ ನಿಗದಿತವಾಗಿ ಅಪ್ಲೋಡ್‌ ಮಾಡಲಾಗುತ್ತಿದೆ.
ಇ-ಪೇಪರ್‌ ಮತ್ತು ಮಾಹಿತಿ ತುಣುಕು ಹಲವಾರು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತದೆ. ಬೆರಳತುದಿಯಲ್ಲೇ ಕ್ಷಣಕ್ಷಣದ ಸುದ್ದಿಯನ್ನು ಪಡೆಯುವ ಹೊಸ ತಂತ್ರಜ್ಞಾನವನ್ನು ಈ ಸಂಜೆ ಅಳವಡಿಸಿಕೊಂಡು ರಾಜ್ಯ, ಹೊರರಾಜ್ಯ ಸೇರಿದಂತೆ ವಿದೇಶಗಳಲ್ಲೂ ಈ ಸಂಜೆ ಛಾಪು ಮೂಡಿಸಿದೆ.ವಿಶೇಷವೆಂದರೆ ಸರಾಸರಿ ಒಂದು ಕೋಟಿವರೆಗೂ ವೀಕ್ಷಕರನ್ನು ಹೊಂದಿರುವುದು ನಮ ಹೆಮೆ. ಎಲ್ಲಾ ಪ್ರೀತಿಯ ಓದುಗರಿಗೆ ಇದೇ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಅರ್ಪಿಸಿ ಅವರ ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ.

facebook.com/eesanjenews
twitter.com/eesanjenews
instagram.com/eesanjenews
eesanje.com
https://www.youtube.com/@eesanjenews

RELATED ARTICLES

Latest News