Friday, May 17, 2024
Homeರಾಜ್ಯಮತದಾನ ಮುಗಿದರು ನಿಲ್ಲದ ಜಪ್ತಿ : 1.69 ಕೆಜಿ ಚಿನ್ನ ವಶ

ಮತದಾನ ಮುಗಿದರು ನಿಲ್ಲದ ಜಪ್ತಿ : 1.69 ಕೆಜಿ ಚಿನ್ನ ವಶ

ಬೆಂಗಳೂರು,ಮೇ.2- ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನ ಮುಗಿದಿದ್ದರೂ ಚಿನ್ನ ಹಾಗೂ ನಗದನ್ನು ವಶಪಡಿಸಿಕೊಳ್ಳುವುದು ಮಾತ್ರ ನಿಂತಿಲ್ಲ. ಆದಾಯ ತೆರಿಗೆ ಇಲಾಖೆಯವರು 1,09,89,064 ರೂ. ಮೌಲ್ಯದ 1.69 ಕೆಜಿ ಚಿನ್ನವನ್ನು ಚಾಮರಾಜಪೇಟೆಯ ಸಾರಸ್ವತ ಬ್ಯಾಂಕ್ ಲಾಕರ್‍ನಲ್ಲಿ ವಶಪಡಿಸಿಕೊಂಡಿದ್ದಾರೆ.

ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಲೇಔಟ್‍ನಲ್ಲಿ 46 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೆ 448.71 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ, ವಜ್ರ, ಉಚಿತ ಉಡುಗೊರೆ ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ಸಂಬಂಧ 2249 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ. 2011 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಪೊಲೀಸ್ ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, 140.85 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿವೆ.

ಅಬಕಾರಿ ಇಲಾಖೆಯವರು 178.56 ಕೋಟಿ ರೂ. ಮೊತ್ತದ ಮದ್ಯ, ಡ್ರಗ್ಸ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದರೆ ಆದಾಯ ತೆರಿಗೆ ಅಧಿಕಾರಿಗಳು 48.19 ಕೋಟಿ ರೂ. ಮೊತ್ತದ ನಗದು, ಚಿನ್ನ, ವಜ್ರವನ್ನು ವಶಪಡಿಸಿಕೊಂಡಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು 80.11 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ, ಉಚಿತ ಉಡುಗೊರೆ ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

RELATED ARTICLES

Latest News