ಬೆಂಗಳೂರು, ಏ.18- ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೈಟೆಕ್ ಬಸ್ಸನ್ನು ಹೆದ್ದಾರಿಯ ಅರ್ಧದಲ್ಲೇ ತಡೆದ ಚುನಾವಣಾಧಿಕಾರಿಗಳು ಇಂಚಿಂಚೂ ತಪಾಸಣೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಭದ್ರತೆಯ ಕಾನ್‍ವೇಯೊಂದಿಗೆ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದರು. ಹೆದ್ದಾರಿಯ ಚೆಕ್ ಪೋಸ್ಟ್ ಬಳಿ ಬಸ್ಸನ್ನು ತಡೆದ ಚುನಾವಣಾ ವೀಕ್ಷಕರು ಸ್ಥಳೀಯ ಅಧಿಕಾರಿಗಳ ಸಹಾಯದೊಂದಿಗೆ ಸಂಪೂರ್ಣ ತಪಾಸಣೆ ನಡೆಸಿದರು.
ಈ ವೇಳೆ ಮುಖ್ಯಮಂತ್ರಿಯವರು ಬಸ್ ಒಳಗೇ ಕುಳಿತಿದ್ದು ತಪಾಸಣೆಗೆ ಸಹಕಾರ ನೀಡಿದರು. ಸಾರ್ವಜನಿಕರು ಮುಖ್ಯಮಂತ್ರಿಯವರನ್ನು ಕುತೂಹಲದಿಂದ ವೀಕ್ಷಿಸಿಸಿದಲ್ಲದೆ ಫೋಟೊ ತೆಗೆದುಕೊಂಡರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಪರವಾಗಿ ಪ್ರಚಾರ ನಡೆಸಲು ಸಿದ್ದರಾಮಯ್ಯ ತೆರಳಿದ್ದರು. ಸಿದ್ದರಾಮಯ್ಯ ಪ್ರಚಾರಕ್ಕಾಗಿಯೇ ಹೈಟೆಕ್ ಬಸ್ಸನ್ನು ಸಿದ್ಧಗೊಳಿಸಲಾಗಿದೆ.
ಬೆಂಗಳೂರು ಸುತ್ತಮುತ್ತ ಹಾಗೂ ಇತರ ಭಾಗಗಳಲ್ಲಿ ಪ್ರಚಾರ ನಡೆಸುವಾಗ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಈ ಬಸ್‍ನಲ್ಲಿ ಪ್ರಯಾಣ ಮಾಡುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ರೋಡ್‍ಶೋನಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ಅಭ್ಯರ್ಥಿ ರಕ್ಷಾ ರಾಮಯ್ಯ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ಕಳೆದ 10 ತಿಂಗಳಲ್ಲಿ 180 ಕೋಟಿ ರೂ. ಅನುದಾನವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗಾಗಿ ನೀಡಿದ್ದಾರೆ. ಈ ಹಿಂದೆ ಬಿಜೆಪಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರ ಬೇಜಾವಬ್ದಾರಿತನದಿಂದಾಗಿ ರೈತರ ಜಮೀನುಗಳು ಪರಿಭಾವಿತ ಅರಣ್ಯ ಪ್ರದೇಶ ಎಂದು ಗುರುತಿಸಲ್ಪಟ್ಟಿವೆÉ. ಅದನ್ನು ನಮ್ಮ ಸರ್ಕಾರ ಸುಪ್ರೀಂಕೋರ್ಟ್‍ವರೆಗೆ ಹೋಗಿ ರೈತರಿಗೆ ಬಿಡಿಸಿಕೊಡುವುದಾಗಿ ಭರವಸೆ ನೀಡಿದೆ ಎಂದು ಹೇಳಿದರು.