Thursday, December 5, 2024
Homeರಾಜ್ಯಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ಚಾಲೆಂಜಿಂಗ್ ಸ್ಟಾರ್ ಚುನಾವಣಾ ಪ್ರಚಾರ

ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ಚಾಲೆಂಜಿಂಗ್ ಸ್ಟಾರ್ ಚುನಾವಣಾ ಪ್ರಚಾರ

ಮಂಡ್ಯ, ಏ.18- ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ ಉರುಫ್ ಸ್ಟಾರ್ ಚಂದ್ರು ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಪ್ರಚಾರ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು, ಟಿ.ಕೆ.ಹಳ್ಳಿ, ಹುಸ್ಕೂರು, ಹಾಡ್ಲಿ ಸರ್ಕಲ್, ಬೆಳಕವಾಡಿ, ಬಿ.ಜಿ.ಪುರ, ಸರಗೂರು ಹ್ಯಾಂಡ್‍ ಪೋಸ್ಟ್, ಪೂರಿಗಾಲಿ, ಟಿ.ಕಾಗೇಪುರ, ದುಗ್ಗನಹಳ್ಳಿ, ಬಂಡೂರು, ಹಿಟ್ಟನಹಳ್ಳಿ ಕೊಪ್ಪಲು, ಮಿಕ್ಕೇರೆ, ಕಿರುಗಾವಲು, ಚನ್ನಪಿಳ್ಳೆ ಕೊಪ್ಪಲು, ಮಳವಳ್ಳಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ದರ್ಶನ್ ರೋಡ್‍ಶೋ ನಡೆಸಿದರು.ಆರಂಭದಲ್ಲಿ ಹಲಗೂರಿನಲ್ಲಿ ಮಾತನಾಡಿದ ದರ್ಶನ್, ನಾನು ಯಾವುದೇ ಪಕ್ಷದ ಪರ ಅಲ್ಲ, ವ್ಯಕ್ತಿಯ ಪರ. ತಪ್ಪು ಸಂದೇಶ ಹೋಗಬಾರದು ಎಂದು ಮನವಿ ಮಾಡಿದರು.

5 ವರ್ಷಗಳ ಹಿಂದೆ ಪಿ.ಎಂ.ನರೇಂದ್ರಸ್ವಾಮಿಯವರು ಮಾಡಿದ ಸಹಾಯವನ್ನು ಮರೆಯಲು ಆಗುವುದಿಲ್ಲ. ಸುಮಕ್ಕ ಅವರಿಗೆ ಈ ಬಾರಿ ಬಿಜೆಪಿಯ ಟಿಕೆಟ್ ಸಿಗದೇ ಇದ್ದರೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಬೆಂಬಲ ನೀಡಬೇಕು ಎಂದು ಶಾಸಕ ಉದಯ್ ಅವರು ಆರಂಭದಲ್ಲೇ ತಮ್ಮ ಜೊತೆ ಮಾತುಕತೆ ನಡೆಸಿದ್ದರು. ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ ಪಿ.ಎಂ.ನರೇಂದ್ರ ಸ್ವಾಮಿ ಮತ್ತು ಉದಯ್ ಅವರ ಕೈ ಬಲಪಡಿಸಬೇಕು ಎಂದು ದರ್ಶನ್ ಮನವಿ ಮಾಡಿದರು.

ಈ ವೇಳೆ ಅಭಿಮಾನಿಗಳು ದರ್ಶನ್ ಅವರಿಗಾಗಿ ಭಾರೀ ಗಾತ್ರದ ಗುಲಾಬಿ ಹಾರವನ್ನು ಹಾಕಲು ಕ್ರೇನ್‍ನಲ್ಲಿ ತಂದಿದ್ದರು. ದರ್ಶನ್ ಅವರ ಭಾಷಣ ಮುಗಿಯುತ್ತಿದ್ದಂತೆ ಕ್ರೇನ್‍ನ ಸಹಾಯದಲ್ಲಿ ನೇತಾಡುತ್ತಿದ್ದ ಹಾರವನ್ನು ಪ್ರಚಾರ ವಾಹನದ ಹತ್ತಿರ ತರುತ್ತಿದ್ದಂತೆ ತೂಕಕ್ಕೆ ಅದು ಅರ್ಧಕ್ಕೆ ತುಂಡರಿಸಿ ಬಿದ್ದಿದೆ. ಬಿದ್ದು ಹೋದ ಹಾರವನ್ನೇ ಎತ್ತಿ ಹಿಡಿದು ಅಭಿಮಾನಿಗಳು ಫೋಟೋ ತೆಗೆಸಿಕೊಂಡರು.

ರೋಡ್ ಶೋ ಉದ್ದಕ್ಕೂ ಅಲ್ಲಲ್ಲಿ ಭಾಷಣ ಮಾಡಿರುವ ದರ್ಶನ್, ಸ್ಟಾರ್ ಚಂದ್ರು ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಪಿ.ಎಂ.ನರೇಂದ್ರ ಸ್ವಾಮಿ, ದರ್ಶನ್ ಮಂಡ್ಯದ ಸ್ವಾಭಿಮಾನಕ್ಕೆ ಹೋರಾಟ ನಡೆಸಲು ಧರ್ಮದ ಪರ ನಿಲ್ಲುತ್ತಾರೆ ಎಂದು ಹೇಳಿದರು. ಅಲ್ಲಲ್ಲಿ ಅಭಿಮಾನಿಗಳು ಗಲಾಟೆ ಮಾಡುತ್ತಿದ್ದಾಗ ಆಪರೇಷನ್ ಆಗಿದೆ, ಕೈ ನೋವಿದೆ, ಹಾವಳಿ ಇಡಬೇಡಿ ಎಂದು ಮನವಿ ಮಾಡಿದರು.

ರೋಡ್‍ಶೋನಲ್ಲಿ ವಿಧಾನಪರಿಷತ್‍ನ ಮಾಜಿ ಸದಸ್ಯ ಮರಿತಿಬ್ಬೇಗೌಡ ಅವರು ಜೊತೆಯಲ್ಲಿದ್ದರು. ಅಭ್ಯರ್ಥಿಯ ಅನುಪಸ್ಥಿತಿಯಲ್ಲಿ ದರ್ಶನ್ ಸ್ಟಾರ್ ಚಂದ್ರು ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

RELATED ARTICLES

Latest News