ಇಟಾನಗರ,ಜೂ.2- ಅರುಣಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತಪಟ್ಟಿದೆ. ವಿಧಾನಸಭಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಬಿಜೆಪಿ ರಾಜ್ಯದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದು, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮೂರನೇ ಅವಧಿಗೆ ಸರ್ಕಾರ ರಚಿಸುವುದು ಗ್ಯಾರಂಟಿಯಾಗಿದೆ.
ಅರುಣಾಚಲ ಪ್ರದೇಶದ 50 ವಿಧಾನಸಭಾ ಸ್ಥಾನಗಳ ಮತ ಎಣಿಕೆ ಇಂದು ಭಾರೀ ಭದ್ರತೆಯಲ್ಲಿ ಆರಂಭವಾಗಿದೆ. ಆಡಳಿತಾರೂಢ ಬಿಜೆಪಿ ಈಗಾಗಲೇ 10 ವಿಧಾನಸಭಾ ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. ಉಳಿದ 45 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ರಾಜ್ಯದಾದ್ಯಂತ ಭಾರೀ ಮಳೆಯ ನಡುವೆ 24 ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 6 ಗಂಟೆಗೆ ಮತ ಎಣಿಕೆ ಆರಂಭಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಪವನ್ ಕುಮಾರ್ ಸೇನ್ ತಿಳಿಸಿದ್ದಾರೆ.
ಏಪ್ರಿಲ್ 19 ರಂದು ಮೊದಲ ಹಂತದ ಚುನಾವಣೆಯಲ್ಲಿ ಅರುಣಾಚಲ ಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆದಿದ್ದವು.ಈಶಾನ್ಯ ರಾಜ್ಯವು 60 ವಿಧಾನಸಭಾ ಸ್ಥಾನಗಳನ್ನು ಮತ್ತು ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಅಂದಾಜು 82.71 ರಷ್ಟು ಮತದಾರರು ಮತ ಚಲಾಯಿಸಿದ್ದರೆ, ರಾಜ್ಯದ ಎರಡು ಲೋಕಸಭಾ ಸ್ಥಾನಗಳಿಗೆ ಶೇಕಡಾ 77.51 ರಷ್ಟು ಮತದಾನವಾಗಿತ್ತು.
ರಾಜ್ಯದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾದ ಮತಗಳನ್ನು ಜೂನ್ 4 ರಂದು ದೇಶದ ಇತರ ಭಾಗಗಳೊಂದಿಗೆ ಎಣಿಕೆ ಮಾಡಲಾಗುತ್ತದೆ.2019 ರ ಚುನಾವಣೆಯಲ್ಲಿ ಬಿಜೆಪಿ ಎರಡೂ ಲೋಕಸಭೆ ಮತ್ತು 41 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿತ್ತು. ಜೆಡಿಯು ಏಳು ವಿಧಾನಸಭಾ ಸ್ಥಾನಗಳನ್ನು, ಎನ್‌ಪಿಪಿ ಐದು, ಕಾಂಗ್ರೆಸ್ ನಾಲ್ಕು ಮತ್ತು ಪಿಪಿಎ ಒಂದನ್ನು ಗೆದ್ದಿದ್ದವು. ಇಬ್ಬರು ಸ್ವತಂತ್ರ ಅಭ್ಯರ್ಥಿಗಳೂ ಜಯಭೇರಿ ಬಾರಿಸಿದ್ದರು.