ಬೆಂಗಳೂರು,ಸೆ.23- ಅಪಘಾತದಂತಹ ತುರ್ತು ಸಂದರ್ಭದಲ್ಲಿ ಜೀವ ರಕ್ಷಣೆ ಮಾಡುವ ಮಹದುದ್ದೇಶದಿಂದ ಮುಖ್ಯಮಂತ್ರಿಗಳ ಆಪತ್ಕಾಲಯಾನ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ 65 ನೂತನ ಆ್ಯಂಬುಲೆನ್ಸ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ವರ್ಷಗಳ ಸರಾಸರಿಯಂತೆ ರಾಜ್ಯದಲ್ಲಿ ಪ್ರತಿವರ್ಷ 40 ಸಾವಿರ ಅಪಘಾತಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಪ್ರಸ್ತುತ ಚಾಲ್ತಿಯಲ್ಲಿರುವ 108 ಆರೋಗ್ಯ ಕವಚ ಸೇವೆಯಲ್ಲಿ ಇರುವ ಆ್ಯಂಬುಲೆನ್ಸ್ ಗಳು ರೋಗಿಗಳನ್ನು ಅಥವಾ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಲು ಸೀಮಿತವಾಗಿದೆ. ಅವುಗಳಲ್ಲಿ ಜೀವರಕ್ಷಕ ಸಲಕರಣೆಗಳು ಇವೆ. ಅಲ್ಲಿಂದ ಜಿಲ್ಲಾಸ್ಪತ್ರೆಗೆ ಅಥವಾ ಉನ್ನತ ಚಿಕಿತ್ಸೆಗೆ ಕರೆದೊಯ್ಯಬೇಕಾದರೆ ಸಮಸ್ಯೆಗಳು ಎದುರಾಗುತ್ತವೆ.
ಹೀಗಾಗಿ ಅಪಘಾತದಲ್ಲಿ ತೊಂದರೆಗೊಳಗಾದವರಿಗಾಗಿಯೇ ವಿಶೇಷ ಸೇವೆ ಒದಗಿಸಲು ಆಪತ್ಕಾಲಯಾನ ಆ್ಯಂಬುಲೆನ್ಸ್ ಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು. 65 ಆ್ಯಂಬುಲೆನ್ಸ್ ಗಳಲ್ಲಿ 26 ಅಡ್ವಾನ್ಸ್ ಲೈಫ್ ಸಪೋರ್ಟ್ ಸೌಲಭ್ಯ ಹೊಂದಿವೆ. ವೆಂಟಿಲೇಟರ್, ಔಷಧಿ ಹಾಗೂ ತಂತ್ರಜ್ಞರನ್ನು ಒಳಗೊಂಡಿವೆ.
39 ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಗಳು ತಂತ್ರಜ್ಞರು ಹಾಗೂ ಕನಿಷ್ಟ ಸೌಲಭ್ಯಗಳನ್ನು ಒಳಗೊಂಡಿವೆ. ಅಪಘಾತಗಳ ಪ್ರಕರಣಗಳು ಹೆಚ್ಚಿರುವ ಪ್ರದೇಶಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿದ್ದು, ಆ ಸುತ್ತಮುತ್ತಲಿನ ತಾಲ್ಲೂಕು ಅಥವಾ ಜಿಲ್ಲಾಸ್ಪತ್ರೆಗಳಿಗೆ ಟ್ರಾಮಾಕೇರ್ ಸೌಲಭ್ಯಗಳನ್ನು ಪೂರೈಸುವುದು ಹಾಗೂ ಅಲ್ಲಿನ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲು 25 ಕೋಟಿ ರೂ.ಗಳನ್ನು ಬಳಕೆ ಮಾಡಲಾಗುವುದು. ಉಳಿದ 20 ಕೋಟಿ ರೂ.ಗಳಲ್ಲಿ ಆ್ಯಂಬುಲೆನ್‌್ಸಗಳನ್ನು ಖರೀದಿಸಲಾಗಿದೆ ಎಂದರು.
ಈ ವರ್ಷ ರಸ್ತೆ ಸುರಕ್ಷತಾ ನಿಧಿಯಡಿ 45 ಕೋಟಿ ರೂ.ಗಳನ್ನು ನೀಡಲಾಗಿದೆ. ಮುಂದಿನ ವರ್ಷ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಆರೋಗ್ಯ ಇಲಾಖೆಗೆ ರಸ್ತೆ ಸುರಕ್ಷತಾ ನಿಧಿಯಡಿ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.