Friday, November 22, 2024
Homeರಾಜ್ಯರಾಜ್ಯದ ಅಣೆಕಟ್ಟೆಗಳ ಸುರಕ್ಷತೆಗೆ ತಜ್ಞರ ಸಮಿತಿ ರಚನೆ

ರಾಜ್ಯದ ಅಣೆಕಟ್ಟೆಗಳ ಸುರಕ್ಷತೆಗೆ ತಜ್ಞರ ಸಮಿತಿ ರಚನೆ

ಬೆಂಗಳೂರು,ಆ.12- ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ಗೇಟ್ ಒಡೆದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಅಣೆಕಟ್ಟೆಗಳಲ್ಲೂ ಸುರಕ್ಷತಾ ಕ್ರಮಗಳ ಪರಿಶೀಲನೆಗಾಗಿ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಜಲಸಂಪನೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ನಾಳೆ ಡ್ಯಾಂ ಪರಿಶೀಲನೆಗೆ ಭೇಟಿ ನೀಡಲಿದ್ದಾರೆ ಎಂದರು.ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ಗೇಟ್ ಒಡೆದುಹೋಗಿರುವ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗಿದೆ. ಗುತ್ತಿಗೆದಾರರ ಜೊತೆ ಚರ್ಚೆ ಮಾಡಿದ್ದೇವೆ. ವಿನ್ಯಾಸವನ್ನು ಕಳುಹಿಸಿಕೊಡಲಾಗಿದೆ. ನಾಲ್ಕೈದು ದಿನಗಳಲ್ಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.

50-60 ಟಿಎಂಸಿ ನೀರನ್ನು ಉಳಿಸಿ ರೈತರಿಗೆ ಒಂದು ಬೆಳೆಗೆ ನೀರು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳ ಹಾಗೂ ತಂತ್ರಜ್ಞರ ಜೊತೆ ತಾವು ಚರ್ಚೆ ಮಾಡಿದ್ದು, ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಅಣೆಕಟ್ಟಿ ಪರಿಸ್ಥಿತಿ ಅಪಾಯದಲ್ಲಂತೂ ಇತ್ತು ಎಂದರು.

ರಾಜ್ಯದ ಎಲ್ಲಾ ಡ್ಯಾಂಗಳನ್ನು ಖುದ್ದು ಪರಿಶೀಲಿಸಿ ವರದಿ ನೀಡಲು ಎರಡು ದಿನಗಳಲ್ಲಿ ತಂತ್ರಜ್ಞರ ಸಮಿತಿಯನ್ನು ರಚಿಸಲಾಗುವುದು. ಬಹುತೇಕ ಎಲ್ಲಾ ಡ್ಯಾಂಗಳಲ್ಲೂ ಎರಡು ಹಂತದ ಸುರಕ್ಷತಾ ಕ್ರಮಗಳಿರುತ್ತವೆ.

ತುಂಗಭದ್ರಾ ಡ್ಯಾಂನಲ್ಲಿ ಒಂದೇ ಹಂತದ ಸರಪಳಿ ಇದ್ದು, ಅದು ತುಂಡಾಗಿದೆ. ಅಲ್ಲಿನ ಪರಿಸ್ಥಿತಿ ನೋಡಿ, ಆಗ ನೀರಿನ ರಭಸ ಕಂಡು ನನಗೂ ಆತಂಕವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ನೀರನ್ನು ಉಳಿಸಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲು ಆದೇಶಿಸಲಾಗಿದೆ.

ಉತ್ತಮ ಗುಣಮಟ್ಟದ ಕಬ್ಬಿಣ ನೀಡಲು ಜೆಎಸ್ಡಬ್ಲ್ಯೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಈ ಮೊದಲು ಕ್ರಸ್ಟ್ಗೇಟ್ ಮಾಡಿದವರಿಗೆ ವಿನ್ಯಾಸ ಹಾಗೂ ಆದೇಶ ನೀಡಲಾಗಿದೆ. ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಪ ಮಾಡುವವರು, ಟೀಕೆ ಮಾಡುವವರು ಮಾಡುತ್ತಲೇ ಇರುತ್ತಾರೆ.

ತುಂಗಭದ್ರಾ ಅಣೆಕಟ್ಟು ರಾಜ್ಯಸರ್ಕಾರದ ನಿಯಂತ್ರಣದಲ್ಲಿಲ್ಲ. ನಾವು ನಿಯಂತ್ರಣ ಸಮಿತಿಯ ಸದಸ್ಯರಷ್ಟೇ. ಬೀಗ ಅವರ ಕೈಯಲ್ಲೇ ಇದೆ. ಆದರೂ ಡ್ಯಾಂ ನಮದೇ. ನೆರೆಯ ಆಂಧ್ರಪ್ರದೇಶಕ್ಕೆ ಮೂರು ಲಕ್ಷ ಹೆಕ್ಟೇರ್ಗೆ ಮಾತ್ರ ನೀರು ಪೂರೈಸಲಾಗುತ್ತಿದೆ. ಅತೀ ಹೆಚ್ಚು ನೀರಾವರಿಯನ್ನು ನಾವು ಬಳಸಿಕೊಳ್ಳುತ್ತೇವೆ. ಹೀಗಾಗಿ ತಮ ಜವಾಬ್ದಾರಿ ಇದೆ. ಕ್ರಸ್ಟ್ಗೇಟ್ ಅನ್ನು ದುರಸ್ತಿ ಮಾಡಿಸುತ್ತೇವೆ ಎಂದರು.

ಬಿಜೆಪಿಯ ಪ್ರತ್ಯೇಕ ಬಣ ನಡೆಸುವ ಪಾದಯಾತ್ರೆಗೆ ಯಶಸ್ಸು ದೊರೆಯಲಿ ಎಂದು ಡಿ.ಕೆ.ಶಿವಕುಮಾರ್ ಹಾರೈಸಿದರು.ಬೆಂಗಳೂರಿನಲ್ಲಿ ಕೆರೆಗಳು ತುಂಬಿಲ್ಲ. ಹೀಗಾಗಿ ಇನ್ನಷ್ಟು ಮಳೆ ಬರುವ ಅಗತ್ಯವಿದೆ. ಈಗ ಸುರಿಯುತ್ತಿರುವ ಮಳೆ ಸಾಲುವುದಿಲ್ಲ.

ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿದ್ದರೆ ಅದನ್ನು ಸರಿ ಮಾಡಬಹುದು. ಆದರೆ ಮತ್ತಷ್ಟು ಮಳೆ ಬರಬೇಕು, ಅಂತರ್ಜಲ ಹೆಚ್ಚಬೇಕು. ರಾಮನಗರ, ಚೆನ್ನಪಟ್ಟಣ, ಕನಕಪುರ, ಮಾಗಡಿ, ತುಮಕೂರು, ಕೋಲಾರ, ಕುಣಿಗಲ್ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗಿಲ್ಲ. ಅಣೆಕಟ್ಟು ಭಾಗದಲ್ಲಿ ಮಳೆಯಾಗಿದೆ. ಜಲಾಶಯಗಳಿಗೆ ನೀರು ಬಂದಿದೆ ಎಂದು ಹೇಳಿದರು.

RELATED ARTICLES

Latest News