Thursday, December 5, 2024
Homeರಾಜ್ಯಶೇ.5ರಷ್ಟು ವಿನಾಯ್ತಿಯೊಂದಿಗೆ ಆಸ್ತಿ ತೆರಿಗೆ ಪಾವತಿಯ ಅವಧಿ ವಿಸ್ತರಣೆ

ಶೇ.5ರಷ್ಟು ವಿನಾಯ್ತಿಯೊಂದಿಗೆ ಆಸ್ತಿ ತೆರಿಗೆ ಪಾವತಿಯ ಅವಧಿ ವಿಸ್ತರಣೆ

ಬೆಂಗಳೂರು,ಜು.5- ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ(ಕೆಎಸ್‌‍ಎಲ್‌‍ಎಸ್‌‍ಎ)ದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಆಸ್ತಿ ತೆರಿಗೆಯಲ್ಲಿ ಶೇ.5ರಷ್ಟು ವಿನಾಯಿತಿಯನ್ನು ಜುಲೈ ಅಂತ್ಯದವರೆಗೆ ವಿಸ್ತರಿಸಿದೆ.ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2024-25ನೇ ಸಾಲಿನ ಆಸ್ತಿ ತೆರಿಗೆಯನ್ನು ಆರ್ಥಿಕ ವರ್ಷದ ಮೊದಲ 30 ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾವತಿಸಿದ್ದಲ್ಲಿ ನೀಡಲಾಗುತ್ತಿದ್ದ ಶೇ.5ರಷ್ಟು ವಿನಾಯಿತಿಯನ್ನು ಈ ತಿಂಗಳ ಅಂತ್ಯದವರೆಗೆ ನೀಡಲಾಗುತ್ತಿದೆ.

ಪ್ರಸಕ್ತ ಆರ್ಥಿಕ ವರ್ಷದ ಆಸ್ತಿ ತೆರಿಗೆ ಪಾವತಿಗೆ ಏಪ್ರಿಲ್‌ ತಿಂಗಳಲ್ಲಿ ನೀಡಲಾಗುತ್ತಿದ್ದ ಶೇ.5ರಷ್ಟು ರಿಯಾಯಿತಿಯನ್ನು ಜುಲೈ 31ರವರೆಗೆ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮನವಿಯಂತೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಈ ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಜೂ.4ರಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಲ್‌‍.ರಘುನಾಥ್‌ ಪತ್ರ ಬರೆದಿದ್ದರು. ಇದರಿಂದ ಇನ್ನೂ ಆಸ್ತಿ ತೆರಿಗೆ ಪಾವತಿಸದೇ ಇದ್ದವರು ಜುಲೈ 31ರೊಳಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿ ಶೇ.5ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜುಲೈ 13ರಂದು ರಾಜ್ಯ ವ್ಯಾಪಿ ರಾಷ್ಟ್ರೀಯ ಲೋಕ್‌ ಅದಾಲತ್‌ ಆಯೋಜಿಸಲಾಗಿದೆ. ಇದರಲ್ಲಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾವತಿ ಬಾಕಿ ಇದೆ ಎಂಬ ವಿಚಾರ ಪ್ರಾಧಿಕಾರದ ಗಮನಕ್ಕೆ ಬಂದಿದೆ.

ಶೇ.5ರಷ್ಟು ರಿಯಾಯಿತಿಯನ್ನು ಜುಲೈ 13ರವರೆಗೆ ನೀಡಿದರೆ ಲೋಕ ಅದಾಲತ್‌ ಅವಕಾಶವನ್ನು ಬಳಸಿಕೊಂಡು ಆಸ್ತಿ ಮಾಲೀಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ತೆರಿಗೆ ಪಾವತಿಸಬಹುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುತ್ತದೆ. ಹಾಗಾಗಿ ರಿಯಾಯಿತಿ ಅವಕಾಶವನ್ನು ವಿಸ್ತರಿಸಬೇಕು ಎಂದು ಪ್ರಾಧಿಕಾರ ಮನವಿ ಮಾಡಿತ್ತು.

ಇದನ್ನು ಪರಿಗಣಿಸಿದ ನಗರಾಭಿವೃದ್ಧಿ ಇಲಾಖೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಆರ್ಥಿಕ ವರ್ಷದ ಮೊದಲ 30 ದಿನಗಳಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿ ಮಾಡಿದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲು ಕಲ್ಪಿಸಲಾಗಿರುವ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿ ಆದೇಶಿಸಾಗಿದೆ.

RELATED ARTICLES

Latest News