ಬೆಂಗಳೂರು,ಆ.12- ಒಂದು ಕಡೆ ತೊಟ್ಟಿಲನ್ನು ತೂಗುವ ಮತ್ತೊಂದೆಡೆ ಮಗುವನ್ನು ಚಿವುಟುವ ಬಿಜೆಪಿ ಕೇಂದ್ರ ವರಿಷ್ಠರ ದ್ವಂದ್ವ ನಿಲುವು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸುತ್ತಿದ್ದು, ತಕ್ಷಣವೇ ಮಧ್ಯಪ್ರವೇಶ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಏಕೆಂದರೆ ಮುಡಾ ಹಾಗೂ ವಾಲೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ಚಲೊ ಪಾದಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಇದರ ಬೆನ್ನಲ್ಲೇ ಬಿಜೆಪಿಯ ಖಾಯಂ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಭಾನುವಾರ ಬೆಳಗಾವಿಯ ಹೊರವಲಯದಲ್ಲಿರುವ ರೆಸಾರ್ಟ್‌ವೊಂದರಲ್ಲಿ ಕೆಲವು ಪ್ರಮುಖರು ಸಭೆ ನಡೆಸಿ ಪರ್ಯಾಯ ಯಾತ್ರೆಗೆ ಸಜ್ಜಾಗುತ್ತಿದ್ದಾರೆ.
ಇದು ಪಕ್ಷದ ಕಾರ್ಯಕರ್ತರಲ್ಲೇ ಗೊಂದಲ ಮೂಡಿಸುತ್ತಿದ್ದು, ಭಿನ್ನಮತೀಯ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಪಕ್ಷ ಇನ್ನಷ್ಟು ಅದೋಗತಿಗೆ ಇಳಿಯುತ್ತದೆ ಎಂಬ ಆತಂಕವನ್ನು ಹೊರಹಾಕಿದ್ದಾರೆ.
ರಾಜ್ಯಾಧ್ಯಕ್ಷರೇ ಇಲ್ಲದ ಮೇಲೆ ಪರ್ಯಾಯ ಯಾತ್ರೆಯನ್ನು ಯಾವ ಆಧಾರದ ಮೇಲೆ ನಡೆಸುತ್ತಾರೆ?, ಇದಕ್ಕೆ ಪಕ್ಷದ ವರಿಷ್ಠರು ಅನುಮತಿಯನ್ನು ನೀಡಲಿದ್ದಾರೆಯೇ?, ಪಕ್ಷದ ಚಿಹ್ನೆಯಡಿ ಪಾದಯಾತ್ರೆ ನಡೆಸುವುದಾದರೆ ಬಿ.ವೈ.ವಿಜಯೇಂದ್ರ ಇರಬೇಕಲ್ಲವೇ?, ಇಷ್ಟಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೆ ವರಿಷ್ಠರು ಮಾತ್ರ ಮೌನಕ್ಕೆ ಶರಣಾಗಿರುವ ಉದ್ದೇಶವಾದರೂ ಏನು ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತಿದ್ದಾರೆ.
ನಾವು ಇತರ ಪಕ್ಷಗಳಿಗಿಂತಲೂ ಭಿನ್ನ ಎಂದು ಹೇಳುವ ಬಿಜೆಪಿಯಲ್ಲಿ ಸದ್ಯ ಮನೆಯೊಂದು ಮೂರು ಬಾಗಿಲು ಎನ್ನುವುದಕ್ಕಿಂತಲೂ ಒಂಭತ್ತು ಬಾಗಿಲು ಆಗಿದೆ ಎನ್ನುವುದೇ ಸೂಕ್ತ ಎಂಬುದು ನಿಷ್ಠಾವಂತ ಕಾರ್ಯಕರ್ತರ ಅಳಲು.
ಬೇರೆ ರಾಜ್ಯಗಳಲ್ಲಿ ಸಣ್ಣ ಭಿನ್ನಮತ ಕಿಡಿ ಹತ್ತಿದಾಗ ತಕ್ಷಣವೇ ಮಧ್ಯಪ್ರವೇಶಿಸಿ ಮುಲಾಮು ಹಚ್ಚುವ ವರಿಷ್ಠರಿಗೆ ಕರ್ನಾಟಕದಲ್ಲಿ ಬಣಗಳ ಬಡಿದಾಟ ಜೋರಾಗಿದ್ದರೂ ಏಕೆ ಕೈಕಟ್ಟಿ ಕುಳಿತಿದ್ದಾರೆ. ಅಷ್ಟೊಂದು ಅಸಹಾಯಕರಾಗಿದ್ದಾರೆಯೇ? ಇಲ್ಲವೇ ಎಲ್ಲವೂ ಮೇಲಿನವರ ಅಣತಿಯಂತೆಯೇ ನಡೆಯುತ್ತದೆಯೇ? ಎಂಬ ಗುಮಾನಿ ಕೇಳಿಬಂದಿದೆ.
ಇಷ್ಟ ಇರಲಿ, ಬಿಡಲಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಮೇಲೆ ಒಪ್ಪಿಕೊಳ್ಳಲೇಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಬೇಕಲ್ಲವೇ? ಸ್ವಪಕ್ಷೀಯರ ವಿರುದ್ಧವೇ ಬಹಿರಂಗ ಹೇಳಿಕೆ ನೀಡುವವರಿಗೆ ಕನಿಷ್ಠ ಪಕ್ಷ ಒಂದು ಸಣ್ಣ ನೋಟೀಸ್ ನೀಡಲಿಲ್ಲ ಎಂದರೆ ಪಕ್ಷದಲ್ಲಿ ಶಿಸ್ತು ಕಾಪಾಡಲು ಸಾಧ್ಯವೇ ಎಂದು ಕಾರ್ಯಕರ್ತರೇ ನೊಂದು ಹೇಳುತ್ತಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಜಿ.ಎಂ.ಸಿದ್ದೇಶ್, ಪ್ರತಾಪ್ ಸಿಂಹ, ಬಿ.ಪಿ.ಹರೀಶ್, ಕುಮಾರ್ ಬಂಗಾರಪ್ಪ ಇಂತಹ ಬೆರಳೆಣಿಕೆಯ ನಾಯಕರು ಸಭೆ ನಡೆಸಲು ಮುಂದಾದ ವೇಳೆ ಅದಕ್ಕೆ ಕಡಿವಾಣ ಹಾಕಬೇಕಿತ್ತು.
ವರಿಷ್ಠರಿಗೆ ಎಲ್ಲಾ ಮಾಹಿತಿ ಇದ್ದರೂ ಹಿಂದೇಟು ಹಾಕುತ್ತಿರುವುದಕ್ಕೆ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ.ಈ ಹಿಂದೆ ಕಾರ್ಯಕಾರಿಣಿ ಸಭೆ ನಡೆದಾಗ ಒಗ್ಗಟ್ಟಿನ ಮಂತ್ರ ಪಠಿಸಲಾಗಿತ್ತು. ಇನ್ನು ಮುಂದೆ ಪಕ್ಷದಲ್ಲಿ ಅಸಮಾಧಾನ ಸರಿಹೋಗಿ ಎಲ್ಲವೂ ಸುಸೂತ್ರವಾಗಿ ಮುನ್ನಡೆಯಲಿದೆ ಎಂಬ ಆಶಾಭಾವನೆ ಕೇಳಿಬಂದಾಗಲೇ ಮತ್ತೆ ಬಣ ಬಡಿದಾಟ ಮುನ್ನೆಲೆಗೆ ಬಂದಿರುವುದು ಬಿಜೆಪಿಯನ್ನು ಸಾಕ್ಷಾತ್ ಸೃಷ್ಟಿಕರ್ತ ಕೂಡ ಸರಿ ಮಾಡಲಾರ ಎಂಬ ಅಪವಾದ ಕೇಳಿಬರುತ್ತಿದೆ.
ಬಿಜೆಪಿ ವಿರೋಧಪಕ್ಷವಾಗಿ ಮತ್ತು ಸಂಘಟನಾತಕವಾಗಿಯೂ ವಿಫಲವಾಗಿದೆ ಎಂಬ ಆಪಾದನೆಗಳು ಕೇಳಿಬಂದಾಗ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಮೈಸೂರು ಚಲೊ ಯಾತ್ರೆ ಪಕ್ಷಕ್ಕೆ ಒಂದಿಷ್ಟು ಶಕ್ತಿ ತುಂಬಿತ್ತು. ಆದರೆ ಏಕಾಏಕಿ ಯತ್ನಾಳ್ ಮತ್ತು ಅವರ ತಂಡ ಭಿನ್ನಮತೀಯ ಚಟುವಟಿಕೆಗಳಿಗೆ ಮುನ್ನುಡಿ ಬರೆದಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳಿದೆ.
ಸ್ವಪಕ್ಷೀಯರಿಂದಲೇ ಟೀಕೆ :
ವಿರೋಧ ಪಕ್ಷವಾಗಿ ಬಿಜೆಪಿ ರಾಜ್ಯದಲ್ಲಿ ವಿವಾಗಿದೆ ಎಂಬ ಆರೋಪ ಇತ್ತು. ಇದನ್ನು ಸ್ವತಃ ಬಿಜೆಪಿ ಶಾಸಕರೇ ಮಾಡಿದ್ದರು. ಅದರಲ್ಲೂ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಡಿ.ವಿ.ಸದಾನಂದ ಗೌಡ ಇಂತಹ ಗಂಭೀರ ಆರೋಪವನ್ನು ಮಾಡಿದ್ದರು. ಅಲ್ಲದೆ ಪಕ್ಷ ಸುಧಾರಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದ್ದರು. ಈ ನಡುವೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಬಗ್ಗೆಯೂ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನ ವಿಲವಾಗಿದೆ ಎಂಬ ಆರೋಪ ಇದೆ.