ಶಿವಮೊಗ್ಗ/ಬೆಂಗಳೂರು, ಏ.8- ಬ್ಯಾಂಕ್‌ಗೆ ನಕಲಿ ಚಿನ್ನ ಅಡವಿಟ್ಟು 62 ಕೋಟಿ ಸಾಲ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ.) ಏಕಕಾಲಕ್ಕೆ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ದಾಳಿ ನಡೆಸಿದೆ. ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅವರು ತಂಗಿದ್ದ ಚಾಮರಾಜಪೇಟೆಯಲ್ಲಿರುವ ಬ್ಯಾಂಕ್‌ನ ಗೆಸ್ಟ್‌ಹೌಸ್‌ನಲ್ಲಿ ದಾಳಿ ನಡೆಸಲಾಗಿದೆ.
ಸುಮಾರು 10ಕ್ಕೂ ಹೆಚ್ಚು ಅಧಿ ಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಂಜುನಾಥ್ ಗೌಡ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.ಇನ್ನು ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ ಅವರ ಮನೆ ಮತ್ತು ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಗೋಪಾಲಗೌಡ ಬಡಾವಣೆಯಲ್ಲಿರುವ ಶೋಭಾ ಅವರ ನಿವಾಸ ಹಾಗೂ ಕಚೇರಿ ಮೇಲೆ ಬೆಂಗಳೂರಿನಿಂದ ಆಗಮಿಸಿದ್ದ 8ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ ಅವರು, 2014ರ ಜೂನ್‌ನಲ್ಲಿ ನಕಲಿ ಚಿನ್ನವಿಟ್ಟು 62 ಕೋಟಿ ಸಾಲ ಪಡೆದು ವಂಚನೆ ಮಾಡಿದ ಆರೋಪವಿದೆ.
ಇದೇ ವೇಳೆ ಬ್ಯಾಂಕ್‌ನ ವಾಹನ ಚಾಲಕ ಶಿವಕುಮಾರ್ ಎಂಬುವರ ಮೇಲೂ ದಾಳಿ ನಡೆಸಲಾಗಿದೆ. ನಗರದ ಕಾಮಾಕ್ಷಿ ಬೀದಿಯಲ್ಲಿರುವ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗದ ಗಾಂಧಿಬಜಾರ್ ನಗರದಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ 11 ವರ್ಷಗಳ ಹಿಂದೆ ಹಗರಣ ನಡೆದಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ನಡೆಸಿ ಪೊಲೀಸರು 2014ರ ಅ.18ರಂದು ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯಕ್ಕೆ ಮೊದಲ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಜುನಾಥ್ ಗೌಡಗೆ ಇಡಿ ಸಮನ್ಸ್ ಜಾರಿಗೊಳಿಸಿತ್ತು. ಕಳೆದ ವಾರವಷ್ಟೇ ಇ.ಡಿ ಸಮನ್ಸ್ ಪ್ರಶ್ನಿಸಿದ್ದ ಮಂಜುನಾಥ್ ಗೌಡ ಅವರ ಮೇಲನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.ಡಿಸಿಸಿ ಬ್ಯಾಂಕ್ ಗಾಂಧಿ ಬಜಾರ್ ಶಾಖೆಯಲ್ಲಿ 2014ರಲ್ಲಿ ನಡೆದ ಚಿನ್ನ ಅಡಮಾನ ಸಾಲದ ಹಗರಣಕ್ಕೆ ಸಂಬಂಧಿಸಿದಂತೆ ಆರ್.ಎಂ. ಮಂಜುನಾಥಗೌಡ ವಿರುದ್ಧ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಡಿಸಿಸಿ ಬ್ಯಾಂಕ್ ಹಗರಣದ ಮರು ತನಿಖೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಗಾಂಧಿಬಜಾರ್ ಶಾಖೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿ ನಕಲಿ ಬಂಗಾರ ಅಡವಿಟ್ಟು 62.77 ಕೋಟಿ ರೂ. ವಂಚಿಸಿದ್ದರು.
ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸೇರಿ 18 ಜನರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಸಿಐಡಿಗೆ ತನಿಖೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ ಸಿಐಡಿ, ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡರಿಗೆ ಕ್ಲೀನ್‌ಚಿಟ್ ನೀಡಿತ್ತು.
ಈ ಮಧ್ಯೆ ಸಹಕಾರ ಇಲಾಖೆ ಮಂಜುನಾಥಗೌಡರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿತ್ತು. ಎಂ.ಬಿ.ಚನ್ನವೀರಪ್ಪ ಬ್ಯಾಂಕ್ ಅಧ್ಯಕ್ಷರಾದ ನಂತರ ಬಂಗಾರ ಅಡಮಾನ ಸಾಲ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಬ್ಯಾಂಕ್‌ನ ಆಡಳಿತ ಮಂಡಳಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಸರ್ಕಾರದ ಆದೇಶದಂತೆ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿ ದಾಖಲಾತಿ, ಸಾಕ್ಷಿಗಳ ಹೇಳಿಕೆಗಳ ಆಧಾರ ಮೇಲೆ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹಾಗೂ ಪ್ರಧಾನ ವ್ಯವಸ್ಥಾಪಕ ನಾಗಭೂಷಣ್ ವಿರುದ್ಧದ ಆರೋಪಗಳು ಸಾಬೀತಾದ ಕಾರಣ ಇವರ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.