ಬೆಂಗಳೂರು,ಜೂ.10- ಹುಬ್ಬಳ್ಳಿ-ಧಾರವಾಡದಲ್ಲಿ ಇಬ್ಬರು ಯುವತಿಯರ ಕೊಲೆ ಪ್ರಕರಣದ ಕಹಿನೆನಪು ಮಾಸುವ ಮುನ್ನವೇ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತೆ ಮತ್ತು ಆಕೆಯ ಕುಟುಂಬದ ಸದಸ್ಯರು ಸಾಮೂಹಿಕ ಆತಹತ್ಯೆಗೆ ಯತ್ನಿಸಿರುವುದು ಸಾರ್ವಜನಿಕರ ಆಕ್ರೋಶವನ್ನು ಹೆಚ್ಚಿಸಿದೆ.
17 ವರ್ಷದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ 44 ವರ್ಷದ ಲೋಕೇಶ್ ಅಲಿಯಾಸ್ ಯುಗ ಫೋಟೊಗಳನ್ನು ತೆಗೆದುಕೊಂಡಿದ್ದು ಅದನ್ನು ಅಶ್ಲೀಲ ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬೆದರಿಸಿದ್ದ ಎಂಬ ಆರೋಪ ಕೇಳಿಬಂದಿದೆ.
ಅಷ್ಟಕ್ಕೇ ಸುಮನಾಗದ ಬಾಲಕಿ ಅಪ್ರಾಪ್ತೆಯ ತಾಯಿಯ ಕುರಿತು ಅವಹೇಳನಕಾರಿಯಾಗಿ ನಡೆದುಕೊಂಡಿದ್ದ ಎನ್ನಲಾಗಿದೆ. ಈತನ ಕಿರುಕುಳದಿಂದ ಬೇಸತ್ತ ಕುಟುಂಬದ ಸದಸ್ಯರು ಕೆ.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಕಿರುಕುಳ ನೀಡಿದ ಸಾಕ್ಷ್ಯಗಳಿದ್ದರೆ ತೋರಿಸಿ ಎಂದು ಪೊಲೀಸರು ಕುಟುಂಬದ ಸದಸ್ಯರನ್ನೇ ನಿಂದಿಸಿದ್ದು, ಅಪಮಾನಕಾರಿಯಾಗಿ ನಡೆದುಕೊಂಡರು ಎಂಬ ಆರೋಪಗಳಿವೆ. ಮೂರು ದಿನ ಠಾಣೆಗೆ ಅಲೆದರೂ ಎಫ್‌ಐಆರ್ ದಾಖಲಿಸಲಿಲ್ಲ. ಇತ್ತ ಆರೋಪಿ ಅಪ್ರಾಪ್ತೆಯ ಮನೆಬಾಗಿಲಿಗೆ ಬಂದು ಗಲಾಟೆ ಮಾಡಿದ್ದ.
ಒಂದೆಡೆ ನ್ಯಾಯ ಸಿಗುತ್ತಿಲ್ಲ, ಮತ್ತೊಂದೆಡೆ ಮರ್ಯಾದೆಗೆ ಕುಂದಾಗುತ್ತದೆ ಎಂದು ನೊಂದುಕೊಂಡ ಕುಟುಂಬ ಅಸಹಾಯಕ ಸ್ಥಿತಿಯಲ್ಲಿ ಮಲೆಮಾದೇಶ್ವರ ಬೆಟ್ಟಕ್ಕೆ ತೆರಳಿ ಕಾಡುಪ್ರದೇಶದಲ್ಲಿ ವಿಷ ಸೇವಿಸಿ ಆತಹತ್ಯೆಗೆ ಯತ್ನಿಸಿದೆ.
ಅಜ್ಜ ಮಹದೇವನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಥಳೀಯರು ನೋಡಿ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ಮತ್ತು ಮಗಳು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಅಜ್ಜಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿಸ ಚಂದಗಾಲ ಗ್ರಾಮಸ್ಥರು ದೂರು ನೀಡಿದ್ದು, ಕ್ರಮ ಕೈಗೊಂಡಿಲ್ಲ, ಮೂರು ಬಾರಿ ಠಾಣೆಗೆ ಹೋದರೂ ಸ್ಪಂದಿಸದೆ ಕಿರುಕುಳವಾಗಿರುವುದಕ್ಕೆ ದಾಖಲೆ ಕೊಡಿ ಎಂದು ಪೊಲೀಸರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಇದರಿಂದ ಮನನೊಂದ ನಾಲ್ಕು ಮಂದಿ ಆತಹತ್ಯೆಗೆ ಯತ್ನಿಸಿದ್ದಾರೆ.
ಮೃತಪಟ್ಟ ಮಹದೇವನಾಯ್ಕ ಅವರ ಪಾರ್ಥೀವ ಶರೀರವನ್ನು ಮುಖ್ಯರಸ್ತೆಯಲ್ಲಿ ಗ್ರಾಮಕ್ಕೆ ತರಬಾರದು, ಪೊಲೀಸ್ ಠಾಣೆ ಬಳಿಯೂ ಬರಬಾರದು ಎಂದು ತಡೆಯೊಡ್ಡಲಾಗಿದೆ ಎಂದು ಗ್ರಾಮದ ಹಿರಿಯರು ಆರೋಪಿಸಿದ್ದಾರೆ.ತಾವು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ದೂರು ಸ್ವೀಕರಿಸಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಕಿಡಿಕಾರಿದರು.
ಅಮಾನತು:
ಘಟನೆಗೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳು ಕೆ.ಆರ್.ನಗರ ಇನ್‌್ಸಪೆಕ್ಟರ್ ಪಿ.ಪಿ.ಸಂತೋಷ್ ಮತ್ತು ಹೆಡ್ ಕಾನ್‌್ಸಟೇಬಲ್‌ರನ್ನು ಅಮಾನತುಗೊಳಿಸಲಾಗಿದೆ. ತಡವಾಗಿ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ಲೋಕೇಶ್‌ನನ್ನು ಬಂಧಿಸಿದ್ದಾರೆ. ಈ ಹಿಂದೆ ಹುಬ್ಬಳ್ಳಿ-ಧಾರವಾಡದಲ್ಲಿ ಅಂಜಲಿ ಅಂಬೀಗರ್ ಎಂಬ ಯುವತಿಗೆ ಗಿರೀಶ್ ಎಂಬಾತ ಕಿರುಕುಳ ನೀಡುತ್ತಿದ್ದ.
ಆಕೆಯ ಕುಟುಂಬ ಠಾಣೆಗೆ ದೂರು ನೀಡಿದರೂ ಕ್ರಮ ಕೈಗೊಂಡಿರಲಿಲ್ಲ. ಕೊನೆಗೆ ಆರೋಪಿ ಯುವತಿಯ ಮನೆಗೆ ನುಗ್ಗಿ ಭೀಕರವಾಗಿ ಹತ್ಯೆ ಮಾಡಿದ್ದ. ಅದರ ನಂತರವೂ ಎಚ್ಚೆತ್ತುಕೊಳ್ಳದ ಕೆ.ಆರ್.ನಗರ ಪೊಲೀಸರ ನಿರ್ಲಕ್ಷ್ಯದಿಂದ ಇಡೀ ಕುಟುಂಬವೊಂದು ಪ್ರಾಣಾಂತಿಕ ಸ್ಥಿತಿಗೆ ತಲುಪಿದೆ.