Monday, June 17, 2024
Homeರಾಜಕೀಯನನಗೆ ಯಾರೂ ಹಿತಶತ್ರುಗಳಿಲ್ಲ, ನನಗೆ ನಾನೇ ಶತ್ರು, ಬೆಂಗಳೂರು ಗ್ರಾಮಾಂತರದಲ್ಲಿ ಜಾತಿಯ ಗೆಲುವಾಗಿದೆ : ಡಿ.ಕೆ.ಸುರೇಶ್‌

ನನಗೆ ಯಾರೂ ಹಿತಶತ್ರುಗಳಿಲ್ಲ, ನನಗೆ ನಾನೇ ಶತ್ರು, ಬೆಂಗಳೂರು ಗ್ರಾಮಾಂತರದಲ್ಲಿ ಜಾತಿಯ ಗೆಲುವಾಗಿದೆ : ಡಿ.ಕೆ.ಸುರೇಶ್‌

ರಾಮನಗರ,ಜೂ.10- ನನಗೆ ಯಾರೂ ಹಿತಶತ್ರುಗಳಿಲ್ಲ. ನನಗೆ ನಾನೇ ಶತ್ರು. ಬೆಂಗಳೂರು ಗ್ರಾಮಾಂತರದಲ್ಲಿ ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳು ಹಾಗೂ ಅಸೂಯೆಗೆ ಗೆಲುವಾಗಿದೆ ಎಂದು ಹಾಲಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ನನ್ನನ್ನು ಹಾಗೂ ನನ್ನ ಕೆಲಸವನ್ನು ತಿರಸ್ಕರಿಸಿ ವಿರಾಮ ನೀಡಿದ್ದಾರೆ. ನಾನು ಇದರ ನಿರೀಕ್ಷೆಯಲ್ಲಿದ್ದೆ. ಎಲ್ಲದಕ್ಕೂ ಪೂರ್ಣವಿರಾಮ ಬೇಕು. ಜನರ ತೀರ್ಪಿನಂತೆ ವಿರಾಮ ತೆಗೆದುಕೊಳ್ಳುತ್ತೇನೆ ಎಂದರು. ಬೆಂಗಳೂರು ಗ್ರಾಮಾಂತರದ ಗೆಲುವು ಬಿಜೆಪಿ ಅಥವಾ ಜೆಡಿಎಸ್‌‍ನ ಗೆಲುವಲ್ಲ. ಜಾತಿಯ ಗೆಲುವು. ಗ್ಯಾರಂಟಿಗಳ ಮಧ್ಯೆ ಜಾತಿ, ಧರ್ಮದ ಭಾವನೆ ಒಂದು ಕೈ ಮೇಲಾಗಿದೆ ಎಂದು ಹೇಳಿದರು.

ನನಗೆ ರಾಜಕಾರಣ ಇಷ್ಟ ಇರಲಿಲ್ಲ. ಉಪಚುನಾವಣೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ನಾಯಕರುಗಳು ಡಿ.ಕೆ.ಶಿವಕುಮಾರ್‌ರವರ ಮೇಲೆ ಒತ್ತಡ ತಂದು ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಇಲ್ಲಿ ಯಾರು ನಮ ಪರವಾಗಿ ಇರುತ್ತಾರೆ, ಯಾರು ಪರವಾಗಿರುವುದಿಲ್ಲ ಎಂಬುದು ಗೊತ್ತಾಗುವುದಿಲ್ಲ ಎಂದರು.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವುದಿಲ್ಲ. ಅಚ್ಚರಿಯ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಅವರನ್ನು ಗೆಲ್ಲಿಸಲು ನಾನು ಶ್ರಮಿಸುತ್ತೇನೆ ಎಂದು ಹೇಳಿದರು.

ತಾವು ಭಾವನಾತಕ ವಿಚಾರಗಳನ್ನು ಬಳಸಿಕೊಂಡವರಲ್ಲ. ಪ್ರತಿಯೊಬ್ಬರ ಕಷ್ಟ-ಸುಖಗಳಲ್ಲಿ ಭಾಗಿಯಾದವನು. ರೈತರ, ಜನರ ಸಮಸ್ಯೆಗೆ ಸ್ಪಂದಿಸಿದವನು. ಅಭಿವೃದ್ಧಿಗೆ ಒತ್ತು ನೀಡಿದವನು. ಜನ ಅದನ್ನು ತಳ್ಳಿ ಹಾಕಿದ್ದಾರೆ. ಪಂಚಖಾತ್ರಿ ಯೋಜನೆಯಲ್ಲಿ ಅತೀ ಹೆಚ್ಚು ಫಲಾನುಭವಿಗಳಿದ್ದಾರೆ. ಆದರೂ ಸೋಲಾಗಿದೆ ಎಂದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿದರೆ ಮೂರು ತಿಂಗಳಲ್ಲೇ ಅದನ್ನು ಪೂರ್ಣಗೊಳಿಸಲು ರಾಜ್ಯಸರ್ಕಾರ ಬದ್ಧವಾಗಿದೆ ಎಂದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದರ ಮೇಲೂ ನನಗೆ ಆಸಕ್ತಿ ಇಲ್ಲ. ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.

ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ ಸೇರಿದಂತೆ 5 ಮಂದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರದಿಂದ ರಾಜ್ಯಕ್ಕಾಗುವ ಅನ್ಯಾಯವನ್ನು ಇವರು ತಪ್ಪಿಸುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಹೇಳಿದರು.

RELATED ARTICLES

Latest News