ನವದೆಹಲಿ,ಫೆ.12- ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸುಮಾರು 200 ರೈತ ಸಂಘಟನೆಗಳು ನಾಳೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದೆಹಲಿ ಚಲೋ ನಡೆಸಲಿವೆ. ಈ ಬಾರಿಯೂ ಸಹ, ರೈತರು ಎಲ್ಲಾ ಅಗತ್ಯ ವಸ್ತುಗಳು, ಪಡಿತರ ಮತ್ತು ಸಿಲಿಂಡರ್‍ಗಳೊಂದಿಗೆ ರಾಷ್ಟ್ರ ರಾಜಧಾನಿಗೆ ಬರುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಪ್ರತಿಭಟನಾಕಾರರನ್ನು ಕರೆತರುವ ವಾಹನಗಳು ನಗರಕ್ಕೆ ಪ್ರವೇಶಿಸದಂತೆ ಗಡಿಗಳನ್ನು ಕಾಂಕ್ರೀಟ್ ಬ್ಲಾಕ್‍ಗಳು ಮತ್ತು ಕಬ್ಬಿಣದ ಮೊಳೆಗಳಿಂದ ಭದ್ರಪಡಿಸಲಾಗಿದೆ. ಹೆಚ್ಚಾಗಿ ಉತ್ತರಪ್ರದೇಶ, ಹರಿಯಾಣ ಮತ್ತು ಪಂಜಾಬ್‍ನಿಂದ ಹಲವಾರು ರೈತ ಸಂಘಗಳು ನಾಳೆ ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ಜಾರಿ ಮಾಡುವಂತೆ ಡೆಲ್ಲಿ ಚಲೋಗೆ ಕರೆ ನೀಡಿವೆ.
ಇಂದು ಸಿಂಗು ಗಡಿಯಲ್ಲಿ ವಾಣಿಜ್ಯ ವಾಹನಗಳಿಗೆ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ನಾಳೆಯ ನಂತರ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧಗಳು ಅನ್ವಯಿಸುತ್ತವೆ. ಪೊಲೀಸರು 5,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ರಸ್ತೆನಿರ್ಬಂಧಿಸಲು ದೊಡ್ಡ ಕಂಟೈನರ್‍ಗಳನ್ನು ಸಾಗಿಸುವ ಕ್ರೇನ್‍ಗಳು ಮತ್ತು ಮಣ್ಣು ಮೂವರ್‍ಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ರೈತರು ರಾಷ್ಟ್ರ ರಾಜಧಾನಿಗೆ ಪ್ರವೇಶಿಸದಂತೆ ಗಡಿಯಲ್ಲಿ ಈಗಾಗಲೇ ಭದ್ರತಾ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದ್ದು, ಪ್ರತಿಭಟನಾನಿರತ ರೈತರು ವಾಹನಗಳ ಮೇಲೆ ನಗರ ಪ್ರವೇಶಿಸಲು ಪ್ರಯತ್ನಿಸಿದರೆ, ಅವರ ಟೈರ್‍ಗಳು ಪಂಕ್ಚರ್ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 144ರಡಿ ನಿಷೇತ ಆದೇಶಗಳನ್ನು ಜಾರಿಗೊಳಿಸಲಾಗಿದೆ. ದೆಹಲಿ ಚಲೋದಲ್ಲಿ ಸುಮಾರು 20,000 ರೈತರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ರೈತರು ದೆಹಲಿ ಪ್ರವೇಶ ಮಾಡಲು ಯತ್ನಿಸಿದರೆ ಹೆದ್ದಾರಿಯನ್ನೇ ಬಂದ್ ಮಾಡಲು ಪೊಲೀಸರು ಯೋಜಿಸಿದ್ದಾರೆ. ಇದರೊಂದಿಗೆ ಯಾವುದೇ ಅನಾಹುತಕಾರಿ ಘಟನೆಗಳನ್ನು ತಡೆಯಲು ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
ಕ್ಷೇತ್ರ ಹಂಚಿಕೆ ಕುರಿತು ಜೆಡಿಎಸ್-ಬಿಜೆಪಿ ನಡುವೆ ಸಮಸ್ಯೆ ಇಲ್ಲ : ಹೆಚ್‌ಡಿಕೆ
ಅಂಬಾಲಾ, ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳ ಗಡಿಗಳನ್ನು ಮುಚ್ಚಲಾಗಿದೆ. ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಎಂಬ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರನೆಟ್ ಸೇವೆಗಳು ಮತ್ತು ಎಸ್‍ಎಂಎಸ್‍ಗಳನ್ನು ಸ್ಥಗಿತಗೊಳಿಸಲಾಗಿದೆ. ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಹರಿಯಾಣದ ಪೆÇಲೀಸ್ ಮಹಾನಿರ್ದೇಶಕ ಶತ್ರುಜೀತ್ ಕಪೂರ್, ಪೊಲೀಸ್ ಮಹಾನಿರೀಕ್ಷಕ (ಅಂಬಾಲಾ ರೇಂಜ್) ಶಿವಾಸ್ ಕವಿರಾಜ್ ಮತ್ತು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಜಶಂದೀಪ್ ಸಿಂಗ್ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಚಂಡೀಗಢದಿಂದ ದೆಹಲಿಗೆ ಹೋಗುವ ಪ್ರಯಾಣಿಕರು ದೇರಾಬಸ್ಸಿ, ಬರ್ವಾಲಾ/ರಾಮ್ಗಢ, ಸಹಾ, ಶಹಬಾದ್, ಕುರುಕ್ಷೇತ್ರ ಅಥವಾ ಪಂಚಕುಲ, ಯಮುನಾನಗರ ಇಂದ್ರಿ/ಪಿಪ್ಲಿ, ಕರ್ನಾಲ್ ಮೂಲಕ ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಪಂಜಾಬ್‍ಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹರಿಯಾಣ ಪೊಲೀಸರು 50 ಕಂಪನಿಗಳ ಕೇಂದ್ರೀಯ ಅರೆಸೇನಾ ಪಡೆಗಳನ್ನು ನಿಯೋಜಿಸಿದ್ದಾರೆ.
ಪ್ರತಿಭಟನಾನಿರತ ರೈತರು ಯೋಜಿತ ಮೆರವಣಿಗೆಯಲ್ಲಿ ಅನುಮತಿ ಇಲ್ಲದೆ ಭಾಗವಹಿಸದಂತೆ ಮನವಿ ಮಾಡಲಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.