ಚಿಕ್ಕಮಗಳೂರು, ಏ.2- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತ ತಂದೆ ತನ್ನ ಆರು ವರ್ಷದ ಮಗಳು ಸೇರಿದಂತೆ ಮೂವರನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದಲ್ಲಿ ನಡೆದಿದೆ.
ಅತ್ತೆ ಜ್ಯೋತಿ (50), ನಾದಿನಿ ಸಿಂಧು (24) ಹಾಗೂ ಮಗಳು ಮೌಲ್ಯ (6)ಳನ್ನು ಕೊಲೆ ಮಾಡಿ ಆತ್ಮಹತ್ಯೆಮಾಡಿಕೊಂಡ ರತ್ನಾಕರ್ ಗೌಡ(40). ಈತ ಮೂಲತಃ ಕಳಸ ಸಮೀಪದ ಕಿತಲಿಕೊಂಡ ಗ್ರಾಮದ ನಿವಾಸಿ ಸಿಂಧು ಅವರ ಗಂಡ ಅವಿನಾಶ್ (38) ಎಂಬುವರ ಕಾಲಿಗೆ ಗುಂಡು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಳೆಹೊನ್ನೂರಿನ ಪೂರ್ಣಪ್ರಜ್ಞಾ ಶಾಲೆಯ ಬಸ್ ಚಾಲಕರಾಗಿ ರತ್ನಾಕರ್ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಪತ್ನಿ ದೂರವಾದ ಬಳಿಕ ಈತ ತನ್ನ ಮಗಳನ್ನು ತಾನೇ ನೋಡಿಕೊಳ್ಳುತ್ತಿದ್ದರು. ಮಗಳು ನಿತ್ಯವೂ ತನ್ನ ತಾಯಿಯನ್ನು ಕೇಳುತ್ತಿದ್ದಳು. ಶಾಲೆಯಲ್ಲಿ ಆಕೆ ಸಹಪಾಠಿಗಳು ಸಹ ನಿಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತಿದ್ದರು ಎನ್ನಲಾಗಿದೆ.
ಹೆಂಡತಿ ಬಿಟ್ಟು ಹೋಗಿದ್ದಕ್ಕೆ ರತ್ನಾಕರ್ ಮನನೊಂದಿದ್ದರು. ಅಲ್ಲದೇ ಮಗಳು ತೊದಲ ನುಡಿಯಿಂದ ಅಮ್ಮನನ್ನು ಆಗಾಗ್ಗೆ ಕೇಳುತ್ತಿದ್ದಳು. ತಾಯಿ ಇಲ್ಲದೆ ಮಗಳನ್ನು ಬೆಳಸುವುದು ಕಷ್ಟವೆಂದು ತಮ್ಮ ಸ್ನೇಹಿತರ ಬಳಿ ಬೇಸರ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ. ಈ ನಡುವೆ ನಿನ್ನೆ ಸಂಜೆ ರತ್ನಾಕರ್ ಅವರ ಮಗಳನ್ನು ತನ್ನ ಅತ್ತೆಯ ಮನೆಯವರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಾಗಲು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು.
ರಾತ್ರಿ 10 ಗಂಟೆಯ ವೇಳೆಗೆ ಅತ್ತೆ ಮನೆಯವರಿಗೆ ಬರುವುದನ್ನು ತಿಳಿಸದೆ ದಿಢೀರ್ ಆಗಿ ಬಂದೂಕು ಸಮೇತ ಮನೆಯೊಳಗೆ ಹೋಗುತ್ತಿದ್ದಂತೆ ಏಕಾಏಕಿ ಬಂದೂಕಿನಿಂದ ಮನೆಯವರ ಮೇಲೆ ರತ್ನಾಕರ್ ಗುಂಡುಗಳನ್ನು ಹಾರಿಸಿದ್ದರಿಂದ ಮಗಳು ಮೌಲ್ಯ, ಅತ್ತೆ ಜ್ಯೋತಿ, ನಾದಿನಿ ಸಿಂಧು ಸ್ಥಳದಲ್ಲೇ ಮೃತಪಟ್ಟರೆ, ನಾದಿನಿಯ ಪತಿ ಅವಿನಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಲ್ಲರಿಗೂ ಗುಂಡು ಹಾರಿಸಿದ ಬಳಿಕ ಘಟನೆಯಿಂದ ಬೇಸತ್ತು ಆರೋಪಿ ರತ್ನಾಕರ್ ಅತ್ತೆ ಮನೆ ಸಮೀಪದ ಅವರ ತೋಟಕ್ಕೆ ಹೋಗಿ ನಾಡ ಬಂದೂಕಿನಿಂದ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಸುದ್ದಿ ತಿಳಿದು ಸ್ಥಳಕ್ಕೆ ಬಾಳೆಹೊನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆತ್ಮಹತ್ಯೆಗೆ ಮುನ್ನ ಸೆಲ್ಸಿ ವಿಡಿಯೋ:
ರತ್ನಾಕರ್ ಅವರು ಸೆಕ್ಸಿ ವಿಡಿಯೋ ಮೂಲಕ ಸಂಸಾರದ ನೋವನ್ನು ತೋಡಿಕೊಂಡಿದ್ದಾನೆ. ನನ್ನ ಮಗಳ ಖುಷಿ, ಪ್ರೀತಿ, ಸಂತೋಷದ ಮುಂದೆ ಏನೂ ಇಲ್ಲ. ಮಗಳಿಗೆ ಶಾಲೆಯಲ್ಲಿ ಮಕ್ಕಳು ನಿಮ್ಮ ಅಮ್ಮ ಎಲ್ಲಿ ಎಂದು ಕೇಳ್ತಾರೆ. ಮಗಳು ಬಂದು ನನಗೆ ಕೇಳುತ್ತಾಳೆ. ನನಗೆ ಗೊತ್ತಿಲ್ಲದೆ ಮಗಳು ಆಲ್ಬಂನಿಂದ ಫೋಟೋ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ತೋರಿಸಿದ್ದಾಳೆ ಎಂದು ವಿವರಿಸಿದ್ದಾನೆ. ತನ್ನ ನಿರ್ಧಾರವನ್ನ ನನ್ನ ಕುಟುಂಬದವರಿಗೆ ಹೇಳಿದ್ದೇನೆ, ತನ್ನ ಪತ್ನಿ ನನಗೆ ಮೋಸ ಮಾಡಿ ಹೋಗಿ 2 ವರ್ಷ ಆಯ್ತು ಎಂದು ಮೂವರ ಕೊಲೆ ಬಳಿಕ ಆರೋಪಿ ರತ್ನಾಕರ್ ಸೆಲ್ಪಿ ವಿಡಿಯೋ ಮಾಡಿದ್ದು ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.