Saturday, July 27, 2024
Homeರಾಜ್ಯಹೆಣ್ಣು ಭ್ರೂಣ ಪತ್ತೆ-ಹತ್ಯೆ ಪ್ರಕರಣದಲ್ಲಿ ನರ್ಸ್ ಬಂಧನ

ಹೆಣ್ಣು ಭ್ರೂಣ ಪತ್ತೆ-ಹತ್ಯೆ ಪ್ರಕರಣದಲ್ಲಿ ನರ್ಸ್ ಬಂಧನ

ಬೆಂಗಳೂರು,ಡಿ.2- ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಬೈಯಪ್ಪನ ಹಳ್ಳಿ ಠಾಣೆ ಪೊಲೀಸರು ನರ್ಸ್ ಮಂಜುಳ ಎಂಬಾಕೆಯನ್ನು ಬಂಧಿಸಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ಇದುವರೆಗೂ ಬಂಧಿತರಾಗಿರುವ ಸಂಖ್ಯೆ 10ಕ್ಕೆ ಏರಿದೆ.

ಚಾಮರಾಜನಗರದ ನಿವಾಸಿ, ನರ್ಸ್ ಮಂಜುಳಾ ಈ ಹಿಂದೆ ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಪ್ರಕರಣ ಬೆಳಕಿಗೆ ಬಂದ ಬಳಿಕ ಅಲ್ಲಿ ಕೆಲಸವನ್ನು ಬಿಟ್ಟು ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇರಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಇದೀಗ ಮಂಜುಳಾಳನ್ನು ಬಲೆಗೆ ಬೀಳಿಸಿಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ : ತನಿಖೆ ಬಗ್ಗೆ ಗೃಹಸಚಿವ ಪರಮೇಶ್ವರ್ ಹೇಳಿದ್ದೇನು..?

ಮಾತ್ರೆ ಕೊಟ್ಟು ಭ್ರೂಣ ಹತ್ಯೆ:
ಭ್ರೂಣವನ್ನು ಹೇಗೆ ಹತ್ಯೆ ಮಾಡುತ್ತಿದ್ದರು ಎಂಬ ಬಗ್ಗೆ ಆರೋಪಿಗಳು ಮಾಹಿತಿ ನೀಡಿದ್ದನ್ನು ತಿಳಿದು ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಆರು ತಿಂಗಳ ಗರ್ಭಿಣಿಗೆ ಮಾತ್ರೆಯನ್ನು ಕೊಟ್ಟು ಬಳಿಕ ಡೆಲಿವರಿ ಮಾದರಿಯಲ್ಲಿ ಭ್ರೂಣವನ್ನು ಆರೋಪಿಗಳು ಹೊರತೆಗೆಯುತ್ತಿದ್ದರು ಎಂಬುದು ಗೊತ್ತಾಗಿದೆ.

ಸಾಮಾನ್ಯವಾಗಿ 14ರಿಂದ 18 ವಾರಗಳ ಭ್ರೂಣದಲ್ಲಿ ಲಿಂಗ ಪತ್ತೆಯಾಗುತ್ತದೆ. ಸ್ಕ್ಯಾನಿಂಗ್ ವೇಳೆ ಲಿಂಗ ಪತ್ತೆಯಾದ ನಂತರ ಗರ್ಭಿಣಿಗೆ ರಕ್ತ ಪರೀಕ್ಷೆ ಮಾಡಿ ನಂತರ ಭ್ರೂಣವನ್ನು ಹೊರತೆಗೆದು ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಗರ್ಭಿಣಿಗೆ ರಕ್ತ ಪರೀಕ್ಷೆ ಮಾಡಿದ ನಂತರ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಮಾಡಲು ಆರೋಪಿಗಳಾದ ಮಂಜುಳಾ ಹಾಗೂ ಚಂದನ್ ಕೆಲಸ ಆರಂಭಿಸುತ್ತಿದ್ದರು.

ಗರ್ಭಿಣಿ ಮಾತ್ರೆ ತೆಗೆದುಕೊಂಡ ಕೆಲ ಸಮಯದ ನಂತರ ಆಕೆಗೆ ರಕ್ತಸ್ರಾವವಾಗಿ ಭ್ರೂಣ ಹೊರಬರುತ್ತಿತ್ತು. ಆ ವೇಳೆ ಈ ಇಬ್ಬರು ಆರೋಪಿಗಳು ಸೇರಿಕೊಂಡು ಡೆಲಿವರಿ ಮಾಡಿಸಿದ ರೀತಿಯಲ್ಲಿ ಭ್ರೂಣ ಹೊರತೆಗೆಯುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಭ್ರೂಣ ಹತ್ಯೆ ಸಂಬಂಧ ಅಕ್ಟೋಬರ್‍ನಲ್ಲಿ ಬೈಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿದ್ದರು.

ತನಿಖೆಯ ವೇಳೆ ಇದರ ಹಿಂದೆ ಬೃಹತ್ ಜಾಲವೇ ಇರುವುದು ಪತ್ತೆಯಾಗಿತ್ತು. ಅದರಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿ ಒಬ್ಬೊಬ್ಬರಂತೆ ಇದುವರೆಗೂ ಹತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಎರಡು ವರ್ಷಗಳಲ್ಲಿ 900ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಇದೀಗ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಿದೆ. ಸದ್ಯದಲ್ಲೇ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಿದ್ದಾರೆ.

RELATED ARTICLES

Latest News