Thursday, December 12, 2024
Homeರಾಜಕೀಯ | Politicsರಾಜ್ಯ ಬಿಜೆಪಿಯಲ್ಲಿ ಮಿತಿಮೀರಿದ ಬಣ ಬಡಿದಾಟ, ಮೌನಕ್ಕೆ ಶರಣಾದ ವರಿಷ್ಠರು

ರಾಜ್ಯ ಬಿಜೆಪಿಯಲ್ಲಿ ಮಿತಿಮೀರಿದ ಬಣ ಬಡಿದಾಟ, ಮೌನಕ್ಕೆ ಶರಣಾದ ವರಿಷ್ಠರು

fighting within in Karnataka BJP

ಬೆಂಗಳೂರು,ನ.27- ರಾಜ್ಯ ಬಿಜೆಪಿಯಲ್ಲಿ ಬಣ ಗುದ್ದಾಟ ಮುಗಿಲು ಮುಟ್ಟಿದೆ. ಬಿಜೆಪಿಯಲ್ಲಿ ಎರಡು ಬಣಗಳು ಬಹಿರಂಗವಾಗಿಯೇ ಯುದ್ಧ ಘೋಷಿಸಿದ್ದು, ಆರೋಪ- ಪ್ರತ್ಯಾರೋಪಗಳು ತೀವ್ರಗೊಂಡಿವೆ. ಯತ್ನಾಳ್ ಹಾಗೂ ವಿಜಯೇಂದ್ರ ಬಣ ಗುದ್ದಾಟ ಪಕ್ಷದ ಸಂಘಟನೆಯ ಮೇಲೆ ತೀವ್ರ ಸ್ವರೂಪದಲ್ಲಿ ಪರಿಣಾಮ ಬೀರುತ್ತಿದ್ದು, ವರಿಷ್ಠರ ಮೌನದ ಬಗ್ಗೆಯೂ ವಿಮರ್ಶೆಗಳು ಶುರುವಾಗಿದೆ.

ಹಾಗಾದರೆ ವರಿಷ್ಠರ ಮೌನ ನಡೆಗೆ ಕಾರಣ ಏನು ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ.ರಾಜ್ಯ ಬಿಜೆಪಿ ನಾಯಕತ್ವದ ವಿರುದ್ದ ಯತ್ನಾಳ್ ಬಂಡಾಯ ಎದ್ದಿದ್ದು ಇದೇ ಮೊದಲಲ್ಲ. ಬಿಎಸ್ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಯತ್ನಾಳ್ ಹಲವು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದರು.ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪವನ್ನೂ ಮಾಡಿದ್ದರು.

ಅಲ್ಲದೆ ಪುತ್ರ ವಿಜಯೇಂದ್ರ ಅವರು ಆಡಳಿತದಲ್ಲಿ ಯಾವ ರೀತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಗಂಭೀರ ಆರೋಪಗಳನ್ನು ಮಾಡಿದ್ದರು. ಯತ್ನಾಳ್ ಆ ಸಂದರ್ಭದಲ್ಲಿ ಒಂಬಂಟಿಯಾಗಿ ಬಿಎಸ್ವೈ ಕುಟುಂಬದ ವಿರುದ್ಧ ರಣಕಹಳೆ ಊದುತ್ತಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮ ಅಂದೂ ಆಗಿರಲಿಲ್ಲ.

ಯತ್ನಾಳ್ ಆರೋಪಗಳಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಬಿಎಸ್ವೈ ವರಿಷ್ಠರಿಗೆ ದೂರು ನೀಡಿದ್ದರೂ ಕೇವಲ ನೋಟಿಸ್ ಜಾರಿಯಾಗಿತ್ತು ಹೊರತಾಗಿ ಗಂಭೀರ ಸ್ವರೂಪದ ಕ್ರಮ ಆಗಿರಲಿಲ್ಲ.

ಯತ್ನಾಳ್ ವಿರುದ್ಧ ರಾಜ್ಯ ನಾಯಕತ್ವಕ್ಕೆ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ. ಅದು ಕೇಂದ್ರ ಶಿಸ್ತು ಸಮಿತಿ ವ್ಯಾಪ್ತಿಗೆ ಬರುತ್ತದೆ. ಹೀಗಿರುವಾಗ ಕೇಂದ್ರದ ನಾಯಕರೂ ಯತ್ನಾಳ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನೆಪ ಮಾತ್ರಕ್ಕೆ ಒಂದು ನೋಟಿಸ್ ನೀಡಿ ಕೈತೊಳೆದುಕೊಂಡಿದ್ದರು. ಇದಕ್ಕೆ ಯತ್ನಾಳ್ ಉತ್ತರ ನೀಡಿ ಮತ್ತೆ ಅದೇ ರೀತಿಯಲ್ಲಿ ಎಂದಿನಂತೆ ಬಿಎಸ್ವೈ ಕುಟುಂಬದ ವಿರುದ್ಧ ತಮ ವಾಗ್ದಾಳಿ ಮುಂದುವರಿಸಿದ್ದರು.

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ವರಿಷ್ಠರು ಮೌನ ವಹಿಸಿದ್ದರಿಂದ ಯತ್ನಾಳ್ಗೂ ಬಲ ಸಿಕ್ಕಂತಾಗಿದೆ. ಇದೀಗ ಯತ್ನಾಳ್ ತಂಡವೂ ವೃದ್ದಿಗೊಳ್ಳುತ್ತಿದೆ. ಈ ತಂಡಕ್ಕೆ ರಮೇಶ್ ಜಾರಕಿಹೊಳಿ, ಬಿಪಿ ಹರೀಶ್, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ನಾಯಕರು ಸೇರ್ಪಡೆಗೊಂಡಿದ್ದಾರೆ. ಪ್ರತಾಪ ಸಿಂಹ ಕೂಡಾ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತಷ್ಟು ಗಟ್ಟಿ ಧ್ವನಿಯಿಂದಲೇ ವಿಜಯೇಂದ್ರ ಬಣಕ್ಕೆ ಯತ್ನಾಳ್ ಸವಾಲು ಹಾಕುತ್ತಿದ್ದಾರೆ.

ಹೈಕಮಾಂಡ್ ಮೌನಕ್ಕೆ ಕಾರಣ ಏನು?:
ರಾಜ್ಯ ಬಿಜೆಪಿಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ವೈ ಬಣವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಪರಿಣಾಮ ಚುನಾವಣೆಯಲ್ಲೂ ಬಿಜೆಪಿ ಹೀನಾಯವಾಗಿ ಸೋಲನ್ನು ಅನುಭವಿಸಿತ್ತು. ಬಳಿಕ ಮತ್ತೆ ಬಿಜೆಪಿ ಹೈಕಮಾಂಡ್ ನಾಯಕರು ದೆಹಲಿಯಲ್ಲಿರುವ ಕೆಲವು ರಾಜ್ಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ಬಿಎಸ್ವೈ ಬಣಕ್ಕೆ ಪ್ರಾಧಾನ್ಯತೆ ನೀಡಿದ್ದರು. ಆದರೆ ಇದನ್ನು ವಿರೋಧಿ ಬಣ ಒಪ್ಪಲು ಸಿದ್ಧವಿಲ್ಲ.

ವಿಜಯೇಂದ್ರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ವಿರೋಧಿ ಬಣದ್ದಾಗಿದೆ. ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಅದು ಏಕ ವ್ಯಕ್ತಿ ತೀರ್ಮಾನವಾಗುತ್ತಿದೆ. ಪಕ್ಷದ ಹಿರಿಯ ನಾಯಕರನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಯತ್ನಾಳ್ ತಂಡ ಭಿನ್ನ ಹಾದಿಯನ್ನು ಹಿಡಿದಿದೆ. ಇದಕ್ಕೆ ಹೈಕಮಾಂಡ್ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜ್ಯ ಬಿಜೆಪಿಯ ಕೆಲವು ನಾಯಕರ ಬೆಂಬಲವೂ ಇದೆ ಎಂಬ ಮಾತು ಕಮಲ ಪಾಳಯದಲ್ಲಿ ಕೇಳಿ ಬರುತ್ತಿದೆ.

ವರಿಷ್ಠರ ವಲಯದ ಪರೋಕ್ಷ ಬೆಂಬಲವೇ ಯತ್ನಾಳ್ ತಂಡವನ್ನು ಬಲಗೊಳಿಸಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ವಿರುದ್ಧ ನಿರಂತರವಾಗಿ ಹರಿಹಾಯ್ತಿದ್ದಾರೆ. ರಾಜ್ಯದಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ವಿಜಯೇಂದ್ರಗೆ ಮೂಗುದಾರ ಹಾಕಲು ಯತ್ನಾಳ್ ಟೀಂ ಅನ್ನು ದೆಹಲಿಯಲ್ಲಿ ಉಳಿದುಕೊಂಡಿರುವ ಕೆಲವರು ಬಳಕೆ ಮಾಡಿದರೂ ಅದು ಇದೀಗ ನಿಯಂತ್ರಣ ತಪ್ಪಿ ಸಾಗುತ್ತಿದೆ.

ಪರಿಣಾಮ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಬಿರುಸುಗೊಂಡಿದೆ. ಆದರೆ ಇದಕ್ಕೆ ಕಡಿವಾಣ ಹಾಕಲು ಹೈಕಮಾಂಡ್ ಮುಂದಾಗುತ್ತದೆಯೇ ಎಂಬ ಪ್ರಶ್ನೆ ಕುತೂಹಲ ಕೆರಳಿಸಿದೆ.

RELATED ARTICLES

Latest News