ಬೆಂಗಳೂರು,ಜ.4- ಹದಿನೈದನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯವಾಗುತ್ತಿದೆ ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‍ಗಳ ಮೂಲಕ ಕೇಂದ್ರದ ಅನ್ಯಾಯವನ್ನು ವಿವರಿಸಿರುವ ಅವರು, ವರ್ಷದಿಂದ ವರ್ಷಕ್ಕೆ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಭಾರೀ ಅನ್ಯಾಯ, ಗುಜರಾತಿಗೆ ವಿಪರೀತ ಏರಿಕೆ ನೀಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಕನ್ನಡಿಗರ ಪಾಲು ಕಡಿತಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಎಸ್‍ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ 2 ನೇ ಸ್ಥಾನದಲ್ಲಿದೆ. ಆದರೆ ಅನುದಾನ ಪಡೆಯುವುದರಲ್ಲಿ ಕೊನೆಯ ಸಾಲಿನಲ್ಲಿದೆ. ಒಂದು ರೂಪಾಯಿ ತೆರಿಗೆ ಪಾವತಿಸಿದರೆ ಕೇಂದ್ರದಿಂದ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು 15 ಪೈಸೆ ಮಾತ್ರ. ಅದೇ ಬಿಹಾರಕ್ಕೆ 7.06 ಪೈಸೆ, ಉತ್ತರ ಪ್ರದೇಶಕ್ಕೆ 2.73 ಪೈಸೆ ದೊರೆಯುತ್ತಿದೆ. ತೆರಿಗೆ ಪಾಲಿನಲ್ಲಿ ಒಟ್ಟು ಲೆಕ್ಕಾಚಾರದ ಪ್ರಕಾರ ಬಿಹಾರಕ್ಕೆ 1,02,737 ಕೋಟಿ ರೂ.ಗಳಾಗಿದ್ದು, ಶೇ.10.06 ರಷ್ಟು ಪಾಲು ಹೊಂದಿದೆ.
ಸೈಬರ್ ಕ್ರೈಂ ಭೇದಿಸುವಲ್ಲಿ ಹಿಂದೆ ಬಿದ್ದ ಬೆಂಗಳೂರು ಪೊಲೀಸರು..!
ಉತ್ತರ ಪ್ರದೇಶ 1,83,237 ಕೋಟಿ ರೂ.ಗಳ ಜೊತೆ ಶೇ.17.94 ರಷ್ಟು ಪಾಲು ಪಡೆದರೆ, ಕರ್ನಾಟಕ 37,257 ಕೋಟಿ ರೂ. ಮಾತ್ರ ಪಡೆದುಕೊಂಡು ಶೇ.3.64 ರಷ್ಟು ಪಾಲು ಹೊಂದಿದೆ.15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ 5,495 ಕೋಟಿ ರೂ. ವಿಶೇಷ ಅನುದಾನಕ್ಕೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಲ್ಲು ಹಾಕಿದ್ದಾರೆ.
14 ನೇ ಹಣಕಾಸು ಆಯೋಗದಲ್ಲಿ ಶೇ. 4.71 ರಷ್ಟು ಪಾಲು ದೊರೆತಿತ್ತು. 15 ನೇ ಹಣಕಾಸು ಆಯೋಗದ ವೇಳೆಗೆ ಅದು ಶೇ.3.64 ರಷ್ಟಾಗಿದ್ದು, ಶೇ.1.07 ರಷ್ಟು ಕಡಿಮೆಯಾಗಿದೆ. ಇದರಿಂದ 3 ವರ್ಷಗಳಲ್ಲಿ ರಾಜ್ಯಕ್ಕೆ 26,140 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗಳು ಕೇಳಿಬಂದಿವೆ. ರಾಜ್ಯದಲ್ಲಿ ಮಂದಿರ, ಮಸೀದಿ ಎಂದು ಗದ್ದಲ ಮಾಡಲಾಗುತ್ತಿದೆ. ಆದರೆ ಕೇಂದ್ರದಿಂದಾಗುತ್ತಿರುವ ತೆರಿಗೆ ಅನ್ಯಾಯ ಹಾಗೂ ಸಂಪನ್ಮೂಲ ಕೊರತೆಯ ಬಗ್ಗೆ ಚರ್ಚೆಗಳಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿಬಂದಿವೆ.