ತುಮಕೂರು, ಅ.10- ಸಮಸ್ಯೆ ಆಲಿಸಲು ಮನೆ ಬಾಗಿಲಿಗೆ ಬಂದ ಪೊಲೀಸರಿಗೆ ಸಮಸ್ಯೆ ಏನಿಲ್ಲ ನನ್ನ ಮಗನಿಗೆ ಒಂದು ಹೆಣ್ಣು ಹುಡುಕಿಕೊಡಿ ಎಂದು ಅಮಾಯಕ ತಾಯಿಯೊಬ್ಬರು ಕೇಳಿರುವ ಹಾಸ್ಯ ಪ್ರಸಂಗ ತುಮಕೂರಿನಲ್ಲಿ ನಡೆದಿದೆ.ತಾಯಿ ಮಾತಿನಿಂದ ತಬ್ಬಿಬ್ಬಾದ ಪೊಲೀಸರು ಆಯ್ತಮಾ… ನಮ ದೊಡ್ಡ ಸಾಹೇಬರಿಗೆ ಹೇಳಿ ಹೆಣ್ಣು ಹುಡುಕುವ ಪ್ರಯತ್ನ ಮಾಡುವ ಭರವಸೆ ನೀಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ ಮನೆ ಮನೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಹಮಿಕೊಂಡಿತ್ತು.
ಈ ಅಭಿಯಾನದಡಿ ಆಯಾ ಠಾಣೆ ವ್ಯಾಪ್ತಿಯ ಪೊಲೀಸರು ಊರಿನ ಮನೆ ಮನೆಗೆ ಹೋಗಿ ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಿಕೊಡುವಂತೆ ಸೂಚಿಸಲಾಗಿತ್ತು. ಅದರಂತೆ ಜಿಲ್ಲೆಯ ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ಪೊಲೀಸರು ಮನೆ ಮನೆಗೆ ಹೋಗಿ ಸಮಸ್ಯೆ ಆಲಿಸುತ್ತ ಅದೇ ಗ್ರಾಮದ ಅಜ್ಜಿಯೊಬ್ಬರ ಮನೆಗೆ ಬಂದರು.
ಮನೆಯಲ್ಲಿ ಒಂಟಿಯಾಗಿದ್ದ ಅಜ್ಜಿಯನ್ನು… ಅಮ ಏನಾದರೂ ಸಮಸ್ಯೆ ಇದೆಯಾ.. ಬೀದಿ ದೀಪ ಸರಿಯಾಗಿದೆಯಾ ಎಂದೆಲ್ಲಾ ಪ್ರಶ್ನೆ ಕೇಳಿದರು. ಆಗ ಇಲ್ಲೇನೂ ಸಮಸ್ಯೆ ಇಲ್ಲ. ಆದರೆ, ತುಂಬಾ ದಿನದಿಂದ ನನ್ನ ಮಗನಿಗೆ ಹೆಣ್ಣು ಸಿಗುತ್ತಿಲ್ಲ. ಸಾಧ್ಯವಾದರೆ ಅವನಿಗೊಂದು ಹೆಣ್ಣು ಹುಡುಕಿಕೊಡಿ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.
ಈ ಪ್ರಶ್ನೆಗೆ ಏನು ಉತ್ತರಿಸಬೇಕು ಎಂದು ತಿಳಿಯದೆ ತಬ್ಬಿಬ್ಬಾದ ಪೊಲೀಸರು ನಮ ದೊಡ್ಡ ಸಾಹೇಬರಿಗೆ ಹೇಳಿ ಒಂದು ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಅಜ್ಜಿ ಮತ್ತು ಪೊಲೀಸರು ನಡೆಸುವ ಈ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.ಕೆಲವು ನೆಟ್ಟಿಗರು ಪಾಪ ಯಾರಾದರೂ ಆ ತಾಯಿಯ ಮಗನಿಗೆ ಹೆಣ್ಣು ಹುಡುಕಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.