ಚಿಕ್ಕಮಗಳೂರು, ಮಾ.26- ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಶೋಲಾ ಅರಣ್ಯದಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು ಸಾವಿರಾರು ಎಕರೆ ಕುರುಚಲು ಗಿಡಗಳು ಹಾಗೂ ಹುಲ್ಲುಗಾವಲು ಸುಟ್ಟು ಕರಕಲಾಗಿವೆ.
ಉರುಸ್ ಆಚರಣೆಗೆಂದು ಹೊರ ಜಿಲ್ಲೆಗಳಿಂದ ಬಂದವರು ಗುಹೆಯ ಸುತ್ತಮುತ್ತ ಗುಡ್ಡದ ತಪ್ಪಲಲ್ಲಿ ಟೆಂಟ್ ಹಾಕಿಕೊಂಡು ಅಡುಗೆ ಮಾಡುತ್ತಿದ್ದು ಇದರ ಪರಿಣಾಮ ಗುಡ್ಡಕ್ಕೆ ಬೆಂಕಿ ತಗಲಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ .
ಬೆಂಕಿಯಿಂದಾಗಿ ಪ್ರವಾಸಿಗರು ಹಾಕಿಕೊಂಡಿರುವ ಟೆಂಟುಗಳು ಕೂಡ ಸಂಪೂರ್ಣವಾಗಿ ಭಸ್ಮವಾಗಿವೆ. ಇಡೀ ಬೆಟ್ಟ ಹೊಗೆಯಿಂದ ಆವರಿಸಿಕೊಂಡಿದ್ದು ಬೆಂಕಿ ಇನ್ನಷ್ಟು ವ್ಯಾಪಿಸಿದ್ದಲ್ಲಿ ಪರಿಸರ ಸೂಕ್ಷ್ಮವಾದ ಅಮೂಲ್ಯ ಶೋಲಾ ಕಾಡುಗಳು ದಹಿಸುವ ಸಾಧ್ಯತೆ ಇದೆ ಈ ಬಾರಿ ಮಳೆ ಕೊರತೆಯಿಂದಾಗಿ ಗಿರಿ ಭಾಗದಲ್ಲಿ ನೀರಿನ ಮೂಲಗಳು ಕೂಡ ಬತ್ತಿ ಹೋಗಿವೆ ಎಲ್ಲೆಂದರಲ್ಲಿ ಗಿರಿ ಪ್ರದೇಶದಲ್ಲಿ ಅಡುಗೆ ತಯಾರಿಸುವುದನ್ನು ಜಿಲ್ಲಾಡಳಿತ ನಿಷೇಧಿಸಬೇಕು ಎಂಬುದು ಅನೇಕರ ಅನಿಸಿಕೆಯಾಗಿದೆ.
ಉರುಸ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ತಾತ್ಕಾಲಿಕ ಶೆಡ್ಡುಗಳಲ್ಲಿಯೇ ಅಡುಗೆ ತಯಾರಿ ನಡೆಸಿಕೊಳ್ಳಬೇಕು ಗಿರಿ ಪ್ರದೇಶದ ಎಲ್ಲಂದರಲ್ಲಿ ಟೆಂಟ್ ನಿರ್ಮಿಸಿ ಅಡುಗೆ ಮಾಡಲು ಅವಕಾಶ ನೀಡಬಾರದು ಎಂದು ಭಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ರಘು ಸಕಲೇಶಪುರ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತದ ಸೂಚನೆ ಇದ್ದರೂ ಕೂಡ ಕ್ಕರಿಸಿ ಅಡುಗೆ ತಯಾರು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.