ಬೆಂಗಳೂರು,ಏ.23- ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಏ.26 ರಂದು ಮತದಾನ ನಡೆಯಲಿದ್ದು, ನಾಳೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ನಾಳೆ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಮತದಾರರಲ್ಲದ ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು ತೆರಳಬೇಕಿದೆ. ಈ ಬಗ್ಗೆ ಈಗಾಗಲೇ ಚುನಾವಣಾ ಆಯೋಗ ಸಂಬಂಧಪಟ್ಟ ಚುನಾವಣಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದು, ವಸತಿ ಗೃಹಗಳು, ಸಮುದಾಯ ಭವನಗಳು ಸೇರಿದಂತೆ ತಪಾಸಣೆ ನಡೆಸಲು ಸೂಚಿಸಿದೆ.
ಚೆಕ್ ಪೋಸ್ಟ್ ಗಳಲ್ಲಿ ಕೂಡ ತಪಾಸಣೆ ನಡೆಸಿ ಮತದಾರರಲ್ಲದವರನ್ನು ಪತ್ತೆಹಚ್ಚಿ ಹೊರಗೆ ಕಳುಹಿಸಲು ನಿರ್ದೇಶನ ನೀಡಿದೆ.ಈ 14 ಕ್ಷೇತ್ರಗಳಲ್ಲಿ ಒಟ್ಟು 247 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಬಿಜೆಪಿ 12 ಹಾಗೂ ಜೆಡಿಎಸ್ 3 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿವೆ. 226 ಪುರುಷ ಹಾಗೂ 21 ಮಹಿಳಾ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಹೀಗಾಗಿ ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಬೇಸಿಗೆ ಬಿರುಬಿಸಿಲನ್ನು ಲೆಕ್ಕಿಸದೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ನಡುವೆ ವಾಗ್ವಾದ, ಆರೋಪ, ಪ್ರತ್ಯಾರೋಪ ತಾರಕಕ್ಕೇರಿದೆ. ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ.
ಬಹಿರಂಗ ಪ್ರಚಾರಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿರುವುದರಿಂದ ರೋಡ್ ಶೋ, ಬಹಿರಂಗ ಸಮಾವೇಶಗಳ ಮೂಲಕ ಪ್ರಚಾರದ ಕಾವು ರಂಗೇರುವಂತಾಗಿದೆ. ಇದಲ್ಲದೆ, ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳ ಹಿತೈಷಿಗಳು ಮನೆಮನೆಗೆ ತೆರಳಿ ಮತದಾರರನ್ನು ಓಲೈಸುವ ಪ್ರಯತ್ನ ನಡೆಸುತ್ತಿದ್ದಾರೆ.
ಬಹಿರಂಗ ಪ್ರಚಾರದ ಜೊತೆಗೆ ನಾನಾ ರೀತಿಯ ತಂತ್ರ, ಕಾರ್ಯತಂತ್ರಗಳ ಮೂಲಕ ಮತದಾರರನ್ನು ಆಕರ್ಷಿಸಲು ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಪಕ್ಷೇತರರು ಕೂಡ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ 14 ಕ್ಷೇತ್ರಗಳಲ್ಲೂ ಪ್ರಚಾರದ ಕಾವು ಏರತೊಡಗಿದೆ.
ಎಲ್ಲಿ ನೋಡಿದರೂ ಚುನಾವಣೆಯ ವಿಚಾರದಲ್ಲಿ ಚರ್ಚೆಯಾಗುತ್ತಿದೆ. ಜನರಲ್ಲೂ ಕೂಡ ಚುನಾವಣಾ ಜ್ವರ ಶುರುವಾಗಿದೆ. ಆಯಾ ಕ್ಷೇತ್ರದ ಜ್ವಲಂತ ವಿಚಾರಗಳಿಗಿಂತ ಮುಖ್ಯವಾಗಿ ರಾಷ್ಟ್ರೀಯ ವಿಚಾರಗಳು ಪ್ರಮುಖ ಚರ್ಚೆಗೆ ಬಂದಿವೆ.ಅಭ್ಯರ್ಥಿ ಹಾಗೂ ಪಕ್ಷಗಳ ಬಗ್ಗೆ ಬಿರುಸಿನ ಚರ್ಚೆಗಳು ನಡೆಯುತ್ತಿದ್ದು, ಮತದಾರರನ್ನು ಆಕರ್ಷಿಸಲು ಎಲ್ಲಾ ರೀತಿಯ ಪ್ರಯತ್ನಗಳು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ನಿರಂತರವಾಗಿ ಮಾಡುತ್ತಿದ್ದಾರೆ.