ಬೆಂಗಳೂರು,ಜೂ.12- ಪ್ರಧಾನಿ ನರೇಂದ್ರಮೋದಿ ಸರ್ಕಾರದಲ್ಲಿ ಕರ್ನಾಟಕದ ಐವರು ಮಂತ್ರಿಮಂಡಲಕ್ಕೆ ಸೇರ್ಪಡೆಯಾಗಿ ಪ್ರಮುಖ ಖಾತೆಗಳು ಲಭಿಸಿರುವುದರಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಯೋಜನೆಗಳಿಗೆ ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಭಾರೀ ಕೈಗಾರಿಕೆ ಮತ್ತು ವಿ.ಸೋಮಣ್ಣಗೆ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳು ಸಿಕ್ಕಿರುವುದು ಅನೇಕ ಯೋಜನೆಗಳಿಗೆ ಚಾಲನೆ ಸಿಗಬಹುದೆಂದು ಹೇಳಲಾಗುತ್ತಿದೆ.
ಈ ಇಬ್ಬರ ಜೊತೆಗೆ ಕೇಂದ್ರದ ಗ್ರಾಹಕರ ಕಲ್ಯಾಣ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಖಾತೆ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರೂ ಪ್ರಮುಖ ಇಲಾಖೆಯ ಸಚಿವರಾಗಿರುವುದರಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ ಸಿಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ವಿಶೇಷವಾಗಿ ನಿರೀಕ್ಷೆಗೂ ಮೀರಿ ಪ್ರಭಾವಿ ಖಾತೆಯನ್ನೇ ದಕ್ಕಿಸಿಕೊಂಡಿರುವ ಕುಮಾರಸ್ವಾಮಿ ಅವರಿಂದ ರಾಜ್ಯದಲ್ಲಿ ಹಲವಾರು ಕಾರಣಗಳಿಂದ ಮುಚ್ಚಿ ಹೋಗಿರುವ ಹಾಗೂ ಮುಚ್ಚುವ ಹಂತಕ್ಕೆ ಬಂದಿರುವ ಕೆಲವು ರೋಗಗ್ರಸ್ಥ ಕಾರ್ಖಾನೆಗಳಿಗೆ ಮರುಜನ ಸಿಗಬಹುದೆಂದು ಹೇಳಲಾಗುತ್ತಿದೆ.
ಮೇಕೆದಾಟು ಸೇರಿದಂತೆ ಅಂತಾರಾಜ್ಯ ಜಲ ವ್ಯಾಜ್ಯಗಳ ಪರಿಹಾರ, ನೀರಾವರಿ ಯೋಜನೆಗಳಿಗೆ ಅಗತ್ಯ ಅನುಮತಿ ಮತ್ತು ಅನುದಾನ ಕೊಡಿಸುವುದು, ರಾಜ್ಯದ ರೈಲ್ವೆ ಯೋಜನೆಗಳಿಗೆ ವೇಗ ನೀಡುವುದು ಸೇರಿದಂತೆ ಎರಡೂ ಇಲಾಖೆಯಡಿ ಬಾಕಿ ಇರುವ ಕಾಮಗಾರಿಗಳ ಪೂರ್ಣಗೊಳಿಸಲು ಸೋಮಣ್ಣ ಶ್ರಮಿಸಲಿದ್ದಾರೆ ಎಂದು ಜನತೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ವಿವಿಧ ಖಾತೆಗಳ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ಸೋಮಣ್ಣ ಪಾದರಸದಂತೆ ಸದಾ ಚಟುವಟಿಕೆಯಿಂದ ಇರುವ ರಾಜಕಾರಣಿ. ತಮಗೆ ಸಿಕ್ಕ ಅವಕಾಶದಲ್ಲಿ ಸಾಕಷ್ಟು ಕೆಲಸ ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಹೊಂದಿರುವ ನಾಯಕ. ಈಗ ಕೇಂದ್ರ ಸಂಪುಟದಲ್ಲಿ ಎರಡು ಮಹತ್ವದ ಖಾತೆಗಳ ಜವಾಬ್ದಾರಿ ಸಿಕ್ಕಿದೆ. ಸಂಪುಟ ದರ್ಜೆಯಲ್ಲದೇ ಇದ್ದರೂ ರಾಜ್ಯ ಖಾತೆಯಲ್ಲಿಯೂ ಇರುವ ಮಿತಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ನೆರವು ಕಲ್ಪಿಸಲಿದ್ದಾರೆ ಎಂಬ ನಿರೀಕ್ಷೆ ಹೊಂದಿದ್ದಾರೆ.
ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವ ಇರುವ ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆಯ ಮಹತ್ವದ ಸ್ಥಾನ ದೊರಕಿದೆ. ಈ ಖಾತೆ ಸಿಕ್ಕಿರುವುದರಿಂದ ಸಹಜವಾಗಿಯೇ ಕರ್ನಾಟಕ ಉದ್ಯಮ ಕ್ಷೇತ್ರದ ಕನಸುಗಳು ಚಿಗುರಿವೆ.
ರಾಜ್ಯಕ್ಕೆ ಬೃಹತ್ ಉದ್ಯಮವನ್ನು ಹಾಗೂ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಮುಖ ಪಾತ್ರ ವಹಿಸಬಹುದು. ಇದೇ ರೀತಿ ನೆರೆ ರಾಜ್ಯಗಳಿಗೆ ಕೈಗಾರಿಕೋದ್ಯಮಿಗಳ ವಲಸೆ ತಡೆಯುವ ನಿಟ್ಟಿನಲ್ಲೂ ಅನುಕೂಲವಾಗಬಹುದೆಂಬ ನಿರೀಕ್ಷೆ ಇದೆ. ಇದರ ಜೊತೆಗೆ ಉಕ್ಕು ಖಾತೆಯನ್ನೂ ಹೊಂದಿರುವುದರಿಂದ ರಾಜ್ಯದ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಪುನಃಶ್ಚೇತನದ ಆಸೆಗೆ ಮತ್ತೆ ಚಿಗುರೊಡೆದಿದೆ. ಎಂಪಿಎಂ ಕಾರ್ಖಾನೆ ಮತ್ತು ಎನ್‌ಜಿಇಎಫ್ ಕಾರ್ಖಾನೆಗಳೂ ಸಹ ಮರುಜೀವ ಪಡೆದುಕೊಳ್ಳುವ ಆಶಾಭಾವನೆ ಇದೆ.