ಕೊಪ್ಪಳ, ನ.2- ರಾಜ್ಯದ ಜನ ಐದು ವರ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ನಾವು ಐದು ವರ್ಷ ಆಡಳಿತ ನಡೆಸುತ್ತೇವೆ, ಕಾಂಗ್ರೆಸ್ ಸರ್ಕಾರ ಅವಧಿ ಪೂರೈಸಲಿದೆ, ನಂತರ ಚುನಾವಣೆಗೆ ಹೋಗುತ್ತೇವೆ ಮತ್ತೆ ಮರು ಆಯ್ಕೆಯಾಗುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಅಕಾರ ಹಂಚಿಕೆ ಸೂತ್ರದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಕೊಪ್ಪಳದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಎರಡುವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಅಧಿಕಾರ ಹಂಚಿಕೆ ವದ್ಧಂತಿಯ ಬಗ್ಗೆ ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದರು. ಜನ 135 ಜನ ಶಾಸಕರನ್ನು ಗೆಲ್ಲಿಸಿ ಐದು ವರ್ಷ ಆಡಳಿತ ನಡೆಸಲು ಆಶೀರ್ವದಿಸಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್‍ಸಿಂಗ್ ಸುರ್ಜೇವಾಲ ಅವರು ನಿನ್ನೆ ಬೆಂಗಳೂರಿಗೆ ಬಂದಿದ್ದು ಸಂಸತ್ ಚುನಾವಣೆ ಕುರಿತು ಚರ್ಚೆ ಮಾಡಿದ್ದಾರೆ. ಕೆಲ ಶಾಸಕರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಲು ನಿರ್ಧರಿಸಲಾಗಿದೆ. ಅದರ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದರು.
ಬಿಜೆಪಿ ಬರ ಅಧ್ಯಯನ ಮಾಡುತ್ತಿರುವ ತಂಡ ನಾಟಕ ಕಂಪನಿ: ಶಿವರಾಜ ತಂಗಡಗಿ
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಬಿಜೆಪಿಯವರು ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ನಡೆಸುವ ಮೊದಲು ಕೇಂದ್ರದಿಂದ ಅನುದಾನ ಕೊಡಿಸಲಿ. ರಾಜ್ಯದಲ್ಲಿ 32 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. 17 ಸಾವಿರ ರೂಪಾಯಿ ಕೋಟಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಮೊದಲು ಅದಕ್ಕೆ ಕೇಂದ್ರ ಸ್ಪಂದಿಸಲಿ ಎಂದರು.
ಕೇಂದ್ರ ಸರ್ಕಾರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರ ಬರ ನಿರ್ವಹಣೆಗೆ 900 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಜಿಲ್ಲಾಕಾರಿಗಳ ವೈಯಕ್ತಿಕ ಖಾತೆಯಲ್ಲಿ 400 ಕೋಟಿ ರೂಪಾಯಿ ಇದೆ. ಕುಡಿಯುವ ನೀರು ಸೇರಿದಂತೆ ಗಂಭೀರ ಸಮಸ್ಯೆಗಳಿಗೆ ತಕ್ಷಣ ಹಣ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿದೆ. ಜೊತೆ ಪ್ರತಿಕ್ಷೇತ್ರಕ್ಕೆ ಒಂದು ಕೋಟಿ ರೂಪಾಯಿ ನೀಡಿದ್ದೇವೆ ಎಂದರು.
ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ 600 ಕೋಟಿ ರೂಪಾಯಿ ಬಾಕಿಯನ್ನು ನೀಡಿಲ್ಲ. ರಾಜ್ಯದಲ್ಲಿ ಇರುವ 26 ಸಂಸದರು ಏನು ಮಾಡುತ್ತಿದ್ದಾರೆ. ದೆಹಲಿಗೆ ಹೋಗಿ ಪ್ರಧಾನಿಯವರನ್ನು ಭೇಟಿ ಮಾಡಿ ಏಕೆ ಒತ್ತಡ ಹೇರುತ್ತಿಲ್ಲ. ನಾವು ಪ್ರಧಾನಿಯವರನ್ನು ಭೇಟಿ ಮಾಡಲು ಯತ್ನಿಸಿದರೂ ಸಮಯ ನೀಡುತ್ತಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ವಿವರಣೆ ನೀಡಲು ನಮ್ಮ ಸಚಿವರಾದ ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ ದೆಹಲಿಗೆ ಹೋಗಿ ಭೇಟಿ ಮಾಡಲು ಯತ್ನಿಸಿದರು ಕೇಂದ್ರ ಸಚಿವರು ಸಮಯ ನೀಡಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದ ಬಿಜೆಪಿ ನಾಯಕರಿಗೆ ಅವರ ಪಕ್ಷದ ಹೈಕಮಾಂಡ್ ನಾಯಕರು ಸಿಗುತ್ತಿಲ್ಲ, ಇನ್ನೂ ನಮಗೆ ಸಿಗುತ್ತಾರಾ ಎಂದು ತಿರುಗೇಟು ನೀಡಿದರು.
ಸೋತು ಮನೆಯಲ್ಲಿರುವ ರಮೇಶ್ ಜಾರಕಿಹೊಳಿ ಸೇರಿದಂತೆ ಬಿಜೆಪಿಯ ನಾಯಕರ ಟೀಕೆಗಳಿಗೆ ನಾವು ಉತ್ತರ ನೀಡುವ ಅಗತ್ಯ ಇಲ್ಲ. ಬಿಜೆಪಿಯವರು ರಾಜ್ಯವನ್ನು ದಿವಾಳಿ ಮಾಡಿದ್ದರೂ ನಾವು ಪಂಚಖಾತ್ರಿ ಯೋಜನೆ ಜಾರಿಗೆ ತಂದಿದ್ದೇವೆ. ಅದರ ಬಗ್ಗೆ ಮೊದಲು ಚರ್ಚೆ ಮಾಡಲಿ ಎಂದರು.
ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರು ನನ್ನ ಬಳಿ ಯಾವ ಚರ್ಚೆಯನ್ನೂ ಮಾಡಿಲ್ಲ. ಖಾಸಗಿಯಾಗಿ ಪ್ರವಾಸ ಮಾಡಿದರೆ ಅದು ಯಾಕೆ ಚರ್ಚೆಯಾಗಬೇಕು, ಸರ್ಕಾರದ ಹಣದಲ್ಲಿ ಪ್ರವಾಸ ಮಾಡಿದರೆ ಪ್ರಶ್ನೆ ಮಾಡಬೇಕು. ಇಲ್ಲವಾದರೆ ಯಾಕೆ ಅಡ್ಡಿ ಪಡಿಸಬೇಕು ಎಂದರು.