ನವದೆಹಲಿ,ಜು.23- ಕೇಂದ್ರ ಸರ್ಕಾರದ ಪ್ರಮುಖ ಪಾಲುದಾರ ಪಕ್ಷವಾಗಿರುವ ತೆಲಗುದೇಶಂ ಪಕ್ಷದ ಬೇಡಿಕೆಗೆ ಮಣಿದಿರುವ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಆಂಧ್ರ ರಾಜಧಾನಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ.ಗಳ ನೆರವು ಘೋಷಿಸಿದೆ. ಬಜೆಟ್ ಪೂರ್ವ ಸಭೆಯಲ್ಲಿ ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಿ ಅಮರಾವತಿ ನಿರ್ಮಾಣ ಮತ್ತು ಅಭಿವೃದ್ಧಿಗೆ RS 15,000 ಕೋಟಿ ಅನುದಾನವನ್ನು ಕೋರಿದ್ದ ರಾಜ್ಯ ಸರ್ಕಾರದ ಪ್ರಮುಖ ಬೇಡಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಸ್ತು ಎಂದಿದ್ದಾರೆ.
ಕೇಂದ್ರ ಸರ್ಕಾರವು ಆಂಧ್ರಪ್ರದೇಶದ ರಾಜಧಾನಿಯ ಅಗತ್ಯವನ್ನು ಗುರುತಿಸುತ್ತದೆ ಮತ್ತು ಬಹು-ಪಕ್ಷೀಯ ಅಭಿವೃದ್ಧಿ ಏಜೆನ್ಸಿಗಳ ಮೂಲಕ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು. ಆಂಧ್ರಪ್ರದೇಶದ ರಾಜಧಾನಿ ಅಭಿವೃದ್ಧಿಗೆ ಸರ್ಕಾರವು ಈ ಹಣಕಾಸು ವರ್ಷ ಮತ್ತು ಮುಂದಿನ ವರ್ಷಗಳಲ್ಲಿ Rs 15,000 ಕೋಟಿ ವ್ಯವಸ್ಥೆ ಮಾಡಲಿದೆ ಎಂದು ಅವರು ಹೇಳಿದರು.
2014 ರಲ್ಲಿ ಆಂಧ್ರಪ್ರದೇಶವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಾಗಿ ವಿಭಜಿಸಿದ ನಂತರ, ಆಂಧ್ರ ಪ್ರದೇಶ ಮರುಸಂಘಟನೆ ಕಾಯಿದೆ, 2014 ರ ಅಡಿಯಲ್ಲಿ ಹೈದರಾಬಾದ್ ಅನ್ನು 10 ವರ್ಷಗಳ ಕಾಲ ರಾಜ್ಯಗಳ ಸಾಮಾನ್ಯ ರಾಜಧಾನಿ ಎಂದು ಘೋಷಿಸಲಾಗಿತ್ತು. ಇದೀಗ ಸಿಎಂ ನಾಯ್ಡು ಅವರು ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದರು.