Friday, November 22, 2024
Homeರಾಜ್ಯವಿವಾದಕ್ಕೆ ಎಡೆ ಮಾಡಿಕೊಟ್ಟ ಜೈನ್ ಕಾಲೇಜು ನಡೆ

ವಿವಾದಕ್ಕೆ ಎಡೆ ಮಾಡಿಕೊಟ್ಟ ಜೈನ್ ಕಾಲೇಜು ನಡೆ

ಬೆಂಗಳೂರು,ಏ.4- ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಿರುವ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ವೇಳೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಜೈನ್ ಕಾಲೇಜು ವಿದ್ಯಾರ್ಥಿಗಳಿಗೆ ಸೂಚಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ವಿವಿಪುರಂ ನಲ್ಲಿರುವ ಜೈನ್ ಕಾಲೇಜು ವಾಟ್ಸಫ್ ಗ್ರೂಫ್ನಲ್ಲಿ ಈ ರೀತಿಯ ಸಂದೇಶ ಹರಿದಾಡುತ್ತಿರುವುದು ಕಂಡು ಬಂದಿದೆ.

ಸಂದೇಶದಲ್ಲಿ ಇಂದು ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಲಾಗಿದೆ ಎಂದು ಕೆಲ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಜಯನಗರದ ಮೈಯ್ಯಾಸ್ ಹೋಟೆಲ್ ಬಳಿ ಸೇರಬೇಕು. ಅಲ್ಲಿ ನಿಮಗೆ ಟಿ-ಶರ್ಟ್ ನೀಡಲಾಗುವುದು. ಆದ್ದರಿಂದ ತಡ ಮಾಡಬಾರದು ಎಂದು ಸಂದೇಶದಲ್ಲಿ ಹೇಳಲಾಗಿದೆ.

ನಾಮಪತ್ರ ಸಲ್ಲಿಕೆ ವೇಳೆ ಕಡ್ಡಾಯವಾಗಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಇದರಿಂದ ಯಾವುದೇ ವಿನಾಯಿತಿಯನ್ನು ನೀಡಲಾಗುವುದಿಲ್ಲ.ಇದಕ್ಕಾಗಿ ನೀವು ಹಾಜರಾತಿ ಪಡೆಯುತ್ತೀರಿ ಎಂದು ಕಾಲೇಜಿನ ಪ್ರತಿಯೊಂದು ತರಗತಿಯ ವಾಟ್ಸಪ್ ಗ್ರೂಪ್ನಲ್ಲೂ ಈ ಸಂದೇಶ ರವಾನೆಯಾಗಿದೆ.

ಅಲ್ಲದೇ, ಕಾಲೇಜಿನ ಆಡಳಿತ ಮಂಡಳಿಯ ಸೂಚನೆಯ ಹಿನ್ನೆಲೆಯಲ್ಲಿ ಪ್ರತಿಯೊಂದು ವಿಭಾಗದ ತರಗತಿಗಳಿಗೆ ತೆರಳಿ ಮೌಖಿಕವಾಗಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿರುವುದಕ್ಕೆ ಹಲವು ವಿದ್ಯಾರ್ಥಿಗಳು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ಕೇವಲ ಜೈನ್ ಕಾಲೇಜಿಗೆ ಮಾತ್ರವಲ್ಲದೆ ಆ ಕ್ಷೇತ್ರಕ್ಕೆ ಒಳಪಡುವ ಹಲವಾರು ಕಾಲೇಜುಗಳಿಗೂ ಈ ರೀತಿಯ ಸಂದೇಶಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಈ ಆರೋಪ ಕುರಿತಂತೆ ಜೈನ್ ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯಿಸಲು ನಿರಾಕರಿಸಿದೆ.

RELATED ARTICLES

Latest News