ಹೈದರಾಬಾದ್,ಏ.22– ಮುಂಬೈ ಮೂಲದ ನಟಿ ಕಾದಂಬರಿ ಜೇತ್ವಾನಿ ಅವರು ದಾಖಲಿಸಿರುವ ಕಿರುಕುಳ ಪ್ರಕರಣ ಸಂಬಂಧ, ಹಿರಿಯ ಐಪಿಎಸ್ ಅಧಿಕಾರಿ ಮತ್ತು ಆಂಧ್ರಪ್ರದೇಶದ ಮಾಜಿ ಗುಪ್ತಚರ ಮುಖ್ಯಸ್ಥ ಪಿಎಸ್‌ಆರ್ ಆಂಜನೇಯುಲು ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಆಂಜನೇಯುಲು ಅವರನ್ನು ಹೈದರಾಬಾದ್‌ನಲ್ಲಿರುವ ಅವರ ನಿವಾಸದಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ಹೆಚ್ಚಿನ ತನಿಖೆಗಾಗಿ ಆಂಧ್ರಪ್ರದೇಶಕ್ಕೆ ವರ್ಗಾಯಿಸಲಾಗಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಅಧಿಕಾರಾವಧಿಯಲ್ಲಿ ಆಂಧ್ರಪ್ರದೇಶದ ಪೊಲೀಸರು ಕಿರುಕುಳ ನೀಡಿದ್ದರೆಂದು ಆರೋಪಿಸಿ ನಟಿ ಕಾದಂಬರಿ ಜೇತ್ವಾನಿ ಈ ಹಿಂದೆ ದೂರು ದಾಖಲಿಸಿದ್ದರು.
ವೈಎಸ್‌ಆರ್ ಕಾಂಗ್ರೆಸ್ ಮುಖಂಡರೊಬ್ಬರು ಮಾಡಿದ ಭೂ ಹಗರಣದ ಆರೋಪದಿಂದ ಈ ಪ್ರಕರಣವು ಬೆಳಕಿಗೆ ಬಂದಿತ್ತು. ಕಳೆದ ವರ್ಷ ನಟಿ ಮತ್ತು ಅವರ ಕುಟುಂಬ ಸದಸ್ಯರನ್ನು ಬಂಧಿಸಲು ಕಾರಣವಾಗಿತ್ತು.ಬಂಧನದ ನಂತರ ಜೇತ್ವಾನಿ ಅವರು ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಾದ ಪಿಎಸ್‌ಆರ್ ಅಂಜನೇಯುಲು, ಕಂಠಿ ರಾಣಾ ಟಾಟಾ ಮತ್ತು ವಿಶಾಲ್ ಗುನ್ನಿ ವಿರುದ್ದ ದುರ್ವತ್ರನೆ ಆರೋಪಿಸಿದ್ದರು.
ತನ್ನ ಬಂಧನ ಅಕ್ರಮ ಮತ್ತು ಇದರಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಮತ್ತು ಮುಂಬೈನಲ್ಲಿ ಕಾರ್ಪೊರೇಟ್ ಕಾರ್ಯನಿರ್ವಾಹಕರ ವಿರುದ್ಧ ಈ ಹಿಂದೆ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯುವಂತೆ ಆಂಜನೇಯುಲು ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದರು.
ಕಾರ್ಯನಿರ್ವಾಹಕರು ಆಂಧ್ರಪ್ರದೇಶದಲ್ಲಿ ರಾಜಕೀಯ ಪ್ರಭಾವ ಬಳಸಿಕೊಂಡು ತನ್ನ ಬಂಧನವನ್ನು ಸಂಘಟಿಸಲು ಮತ್ತು ತನ್ನ ಸಾರ್ವಜನಿಕ ಪ್ರತಿಷ್ಠೆಯನ್ನು ಹಾಳುಮಾಡಿದ್ದಾರೆ ಎಂದು ದೂರಿದ್ದರು. ಹೀಗಾಗಿ ಆಂಧ್ರಪ್ರದೇಶದ ಪೊಲೀಸರು ಅಂತರಿಕ ತನಿಖೆಯನ್ನು ಪ್ರಾರಂಭಿಸಿದ್ದರು.
ಇದು 1992, 2004 ಮತ್ತು 2010ರ ಐಪಿಎಸ್ ಬ್ಯಾಚ್‌ಗಳ ದುರ್ವತ್ರನೆ ಮತ್ತು ಕರ್ತವ್ಯಲೋಪಕ್ಕಾಗಿ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು. ಆ ಸಮಯದಲ್ಲಿ ರಾಜ್ಯ ಗುಪ್ತಚರ ಮುಖ್ಯಸ್ಥರಾಗಿದ್ದ ಆಂಜನೇಯುಲು ಅವರು ಅಧಿಕೃತ ಎಫ್‌ಐಆರ್ ಇಲ್ಲದೆ ನಟಿಯ ಬಂಧನಕ್ಕೆ ನಿರ್ದೇಶನ ನೀಡುವ ಮೂಲಕ ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಮಾನತು ಆದೇಶದ ಪ್ರಕಾರ, ಅವರು ಇತರ ಅಧಿಕಾರಿಗಳನ್ನು ಕರೆಸಿಕೊಂಡರು ಮತ್ತು ಅವಧಿಗೆ ಮುಂಚಿತವಾಗಿ ಬಂಧಿಸುವಂತೆ ಸೂಚಿಸಿದ್ದರು. ವಿಜಯವಾಡದ ಮಾಜಿ ಕಮಿಷನರ್ ಕಂಠಿ ರಾಣಾ ಟಾಟಾ ಅವರು ತನಿಖೆಯನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಲು ವಿಫಲರಾಗಿದ್ದಾರೆ ಮತ್ತು ಮೌಖಿಕ ಸೂಚನೆಗಳ ಆಧಾರದ ಮೇಲೆ ಬಂಧನ ಆದೇಶಗಳನ್ನು ಹೊರಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಬಂಧನಕ್ಕೂ ಮುನ್ನ ದೂರನ್ನು ಕೂಲಂಕುಷವಾಗಿ ಪರಿಶೀಲಿಸದೆ ನಿರ್ಲಕ್ಷ್ಯ ತೋರಿದ ಆರೋಪವನ್ನು ವಿಶಾಲ್ ಗುನ್ನಿ ಮೇಲೆ ಹೊರಿಸಲಾಗಿತ್ತು.